
ನವದೆಹಲಿ: ಹತ್ತು ವರ್ಷದ ಹಿಂದೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಪ್ರಧಾನಿಯಾಗಿ ನೇಮಿಸಲು ಆಗ ರಾಷ್ಟ್ರಪತಿಯಾಗಿದ್ದ ಡಾ. ಅಬ್ದುಲ್ ಕಲಾಂ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು ಎನ್ನುವ ಆರೋಪಗಳನ್ನು ಮಾಜಿ ಪ್ರಧಾನಿ ಮನಮೋಹನ ಸಿಂಗ್ ತಳ್ಳಿಹಾಕಿದ್ದಾರೆ.
ಅದೆಲ್ಲ ಕಟ್ಟುಕಥೆ. ಕಲಾಂ ಯಾವತ್ತೂ ಸೋನಿಯಾರ ಪಾಸ್ ಪೋರ್ಟ್ ಕೇಳಿದ್ದಾಗಲಿ, ದಾಖಲೆಗಳನ್ನು ಕೇಳಿದ್ದಾಗಲಿ ಇಲ್ಲ. ಇಂಥ ಕಥೆಗಳೆಲ್ಲ ಹೇಗೆ ಹರಿದಾಡಿತು ಎನ್ನುವುದೇ ನನಗೆ ಅರ್ಥವಾಗುತ್ತಿಲ್ಲ ಎಂದು ಸಿಂಗ್ ಹೇಳಿದ್ದಾರೆ. ಯುಪಿಎ ಸೋಲಿನ ಬಳಿಕ ನೀಡಿದ ಮೊದಲ ಸಂದರ್ಶನದಲ್ಲಿ ಸಿಂಗ್ ಅವರು ಇಂಡಿಯಾ ಟುಡೆ ಟೀವಿಗೆ ಈ ವಿಚಾರ ತಿಳಿಸಿದ್ದಾರೆ. ಯಾರು
ಪ್ರಧಾನಿಯಾಗಬೇಕು ಎನ್ನುವ ವಿಚಾರದಲ್ಲಿ ಕಲಾಂ ಯಾವತ್ತೂ ಮೂಗು ತೂರಿಸಿದವರಲ್ಲ. ಪ್ರಧಾನಿ ಯಾರಾಗಬೇಕು ಎನ್ನುವುದು ಬಹುಮತ ಪಡೆದ ಪಕ್ಷಕ್ಕೆ ಸಂವಿಧಾನಬದ್ಧವಾಗಿ
ಸಿಗುವ ಅಧಿಕಾರ. ಅದನ್ನು ಕಲಾಂ ಯಾವತ್ತೂ ಪ್ರಶ್ನೆ ಮಾಡಿಲ್ಲ ಎಂದಿದ್ದಾರೆ ಸಿಂಗ್.
ಭಾರತ ಮತ್ತು ಅಮೆರಿಕದ ನಡುವಿನ ಅಣು ಒಪ್ಪಂದಕ್ಕೆ ಸಹಿ ಹಾಕುವ ವೇಳೆ ಒತ್ತಡದಲ್ಲಿದ್ದ ತಮಗೆ ಕಲಾಂ ಅವರು ಅಭೂತಪೂರ್ವ ಬೆಂಬಲ ನೀಡಿದ್ದರು. ಈ ಒಪ್ಪಂದಕ್ಕೆ ಸಂಬಂ„ಸಿ ಕಲಾಂರನ್ನು ವಿಶ್ವಾಸಕ್ಕೆ ತೆಗೆದುಕೊಂಡಿದ್ದೆ. ಒಪ್ಪಂದಕ್ಕೆ ಸಂಬಂಧಿಸಿದ ಎಲ್ಲ ಮಾಹಿತಿಗಳನ್ನು ಆಗಾಗ ವಿವರಿಸುತ್ತಿದ್ದೆ. ಅವರು ನಮ್ಮ ಎಲ್ಲ ಕೆಲಸಗಳಿಗೆ ಬೆಂಬಲ ನೀಡುತ್ತಿದ್ದರು.
ಸಂಸತ್ತಿನಲ್ಲಿ ಈ ಒಪ್ಪಂದವನ್ನು ಮತಕ್ಕೆ ಹಾಕಿದಾಗ ನಾವು ಬೆಂಬಲದ ಕೊರತೆ ಎದುರಿಸುತ್ತಿದ್ದೆವು. ಒಪ್ಪಂದಕ್ಕೆ ಅನುಮೋದನೆ ಸಿಗಬೇಕಿದ್ದರೆ ಮುಲಾಯಂ ಸಿಂಗ್ ಹಾಗೂ ಅಮರ್ ಸಿಂಗ್‍ರ ಬೆಂಬಲ ಅತ್ಯಗತ್ಯವಾಗಿತ್ತು. ಮುಲಾಯಂ ಸಿಂಗ್ ಅವರಿಗೆ ಕಲಾಂ ಬಗ್ಗೆ ಗೌರವವಿತ್ತು. ಹಾಗಾಗಿ ನನ್ನ ಮಾತು ನಂಬುವುದಿಲ್ಲವಾದರೆ ಕಲಾಂ ಅವರ ಜತೆಗೆ ಈ ವಿಚಾರ ಚರ್ಚಿಸಿ ಎಂದು ನಾನು ಸಲಹೆ ಕೊಟ್ಟಿದೆ. ಅದರಂತೆ ಮುಲಾಯಂ ಸಿಂಗ್ ಹಾಗೂ ಅಮರ್ ಸಿಂಗ್ ಇಬ್ಬರೂ ನಂತರ ಕಲಾಂರನ್ನು ಭೇಟಿಯಾಗಿ ಈ ವಿಚಾರವಾಗಿ ಮಾತುಕತೆ ನಡೆಸಿದ್ದರು. ಆಗ ಕಲಾಂ ಅವರು ಈ ಒಪ್ಪಂದ ರಾಷ್ಟ್ರದ ಹಿತಾಸಕ್ತಿ ಪರವಾಗಿದೆ ಎಂದು ಹೇಳಿ ಕಳುಹಿಸಿದ್ದರು. ಆ ನಂತರವೇ ಮುಲಾಯಂ ಸಿಂಗ್ ಈ ಒಪ್ಪಂದದ ಪರವಾಗಿ ಮತಹಾಕಿದ್ದರು
ಎಂದು ಸಿಂಗ್ ತಿಳಿಸಿದ್ದಾರೆ.
ಬಿಹಾರ ವಿಧಾನಸಭೆ ವಿಸರ್ಜಿಸುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಸುಪ್ರೀಂ ಕೋರ್ಟ್ ರದ್ದು ಮಾಡಿದಾಗ ಕಲಾಂ ಅವರ ಆತ್ಮಸಾಕ್ಷಿ ರಾಷ್ಟ್ರಪತಿ ಹುದ್ದೆಯಿಂದ ರಾಜಿನಾಮೆ ನೀಡುವ
ಸಲಹೆ ನೀಡಿತ್ತಂತೆ. ಈ ವಿಚಾರವನ್ನು ಕಲಾಂ ತಮ್ಮ ಕೃತಿ ಟರ್ನಿಂಗ್ ಪಾಯಿಂಟ್ನಲ್ಲೇ ಬಹಿರಂಗಪಡಿಸಿದ್ದರು. ಆದರೆ, ಆಗ ಕಲಾಂರನ್ನು ಆ ರೀತಿಯ ನಿರ್ಧಾರ ತೆಗೆದುಕೊಳ್ಳದಂತೆ ತಡೆದಿದ್ದು ತಾನೇ ಎಂದು ಸಿಂಗ್ ಸಂದರ್ಶನದಲ್ಲಿ ಹೇಳಿದ್ದಾರೆ. ಹೊರಗಿನವರು ಯಾರೂ ಏನೇ ಹೇಳಿಕೊಳ್ಳಲಿ. ಕಲಾಂ ತಮ್ಮ ಪಾಲಿಗೆ ಒಳ್ಳೆಯ ಗೆಳೆಯ, ಗುರು, ತತ್ವಜ್ಞಾನಿ ಆಗಿದ್ದರು. ಅವರ ಜತೆಗೆ ಕಳೆದ ಕ್ಷಣಗಳು ಖುಷಿಯ ಕ್ಷಣಗಳು ಎಂದು ಸಿಂಗ್ ಹೇಳಿಕೊಂಡಿದ್ದಾರೆ.
ರಾಷ್ಟ್ರಪತಿಯಾಗಿ ಅಧಿಕಾರ ಸ್ವೀಕರಿಸಿದ ಕೆಲವೇ ವಾರಗಳ ನಂತರ ಕಲಾಂ ಅವರು ಕೋಮುಗಲಭೆ ಪೀಡಿತ ಗುಜರಾತ್‍ಗೆ ಭೇಟಿ ಕೊಡಲು ಆಸಕ್ತಿ ತೋರಿದ್ದರಂತೆ. ಪ್ರಧಾನಿ ವಾಜಪೇಯಿ ವಿರೋಧದ ಹೊರತಾಗಿಯೂ ಈ ರೀತಿಯ ಕೆಲಸಕ್ಕೆ ಮುಂದಾಗಿದ್ದು ನಿಜ. ಯಾಕೆಂದರೆ ಕಲಾಂ ಅವರು ಕೋಮು ಸೌಹಾರ್ದಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದರು. ಈ ವಿಚಾರಕ್ಕೆ ಸಂಬಂಧಿಸಿ ತಾವಿಬ್ಬರೂ ಆಗಾಗ ಮಾತುಕತೆ ನಡೆಸುತ್ತಿದ್ದೆವು ಎಂದು ಸಿಂಗ್ ಹೇಳಿಕೊಂಡಿದ್ದಾರೆ.
Advertisement