
ಬೆಂಗಳೂರು: ಮಾಜಿ ಮೇಯರ್ ಶಾಂತಕುಮಾರಿ ವಿರುದ್ಧದ ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣ ಸಂಬಂಧ ಲೋಕಾಯುಕ್ತ ಪೊಲೀಸರು ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದಾರೆ.
5 ಸಾವಿರಕ್ಕೂ ಅಧಿಕ ಪುಟಗಳ ಆರೋಪ- ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ಮಾಜಿ ಮೇಯರ್ ಶಾಂತಕುಮಾರಿ ಅವರು ತಮ್ಮ ಆದಾಯಕ್ಕಿಂತ ಶೇ.46.90ರಷ್ಟು ಅಥಿಕ
ಆಸ್ತಿ ಸಂಪಾದಿಸಿರುವುದು ತನಿಖೆ ವೇಳೆ ತಿಳಿದು ಬಂದಿದೆ ಎಂದು ಆರೋಪ ಪಟ್ಟಿಯಲ್ಲಿ ವಿವರಿಸಲಾಗಿದೆ.
ಲೋಕಾಯುಕ್ತ ದಾಳಿಯಲ್ಲಿ ಪತ್ತೆ: ಮೂಡಲಪಾಳ್ಯ ವಾರ್ಡ್‍ನಿಂದ ಆಯ್ಕೆಯಾಗಿದ್ದ ಶಾಂತಕುಮಾರಿ ಅಕ್ರಮ ಆಸ್ತಿ ಸಂಪಾದಿಸಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ 2012ರ ಮಾರ್ಚ್ 16ರಂದು ಲೋಕಾಯುಕ್ತ ಅ„ಕಾರಿಗಳು ದಾಳಿ ನಡೆಸಿದ್ದರು. ಅವರ ಮನೆ ಹಾಗೂ ಕಚೇರಿಯಲ್ಲಿ ರು.1.38 ಕೋಟಿ ಮೌಲ್ಯದ ಆಸ್ತಿ ಪತ್ತೆಯಾಗಿತ್ತು. ಇದರಲ್ಲಿ 750 ಗ್ರಾಂ ಚಿನ್ನಾಭರಣ, 3 ಕೆಜಿ ಬೆಳ್ಳಿ, ರು.20 ಲಕ್ಷ ನಗದು, ಬ್ಯಾಂಕ್ ಖಾತೆಗಳು ಹಾಗೂ ಕನ್ನಮಂಗಲ ಬಳಿ 3 ಎಕರೆ ಜಮೀನು, ದೊಡ್ಡಬಳ್ಳಾಪುರದ ಮಧುರೈ ಬಳಿ 1 ಎಕರೆ ಆಸ್ತಿ ಸೇರಿದಂತೆ
ಹಲವೆಡೆ ಪತಿ ಹೆಸರಿನಲ್ಲಿ ಆಸ್ತಿ ಸಂಪಾದಿಸಿರುವ ದಾಖಲೆಗಳು ಪತ್ತೆಯಾಗಿದ್ದವು.
ಶಾಂತಕುಮಾರಿ ಆದಾಯಕ್ಕೂ ಮೀರಿ ಶೇ.46.90ರಷ್ಟು ಅಕ್ರಮ ಆಸ್ತಿ ಸಂಪಾದಿಸಿದ್ದಾರೆ. ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಲು ಸಾಕಷ್ಟು ಸಾಕ್ಷ್ಯಾಧಾರಗಳು ಲಭಿಸಿರುವುದರಿಂದ ಎಲ್ಲಾ ಪ್ರಕ್ರಿಯೆ ಪೂರ್ಣಗೊಳಿಸಿ ಆರೋಪಪಟ್ಟಿ ಸಲ್ಲಿಸಲಾಗಿದೆ ಎಂದು ಅಧಿಕಾರಿ ಹೇಳಿದ್ದಾರೆ. ಮಲ್ಲತಹಳ್ಳಿ ನಿವಾಸಿ ಎಂ.ಜಯರಾಮ್ ಎಂಬುವರು 2010ರ ಸೆ.23ರಂದು ಸಲ್ಲಿಸಿದ್ದ ದೂರಿನ ಆಧಾರದ ಮೇಲೆ ವಿಚಾರಣೆ ನಡೆಸಿ 2011ರ ನ.2ರಂದು ಉಪ ಲೋಕಾಯುಕ್ತರು ತನಿಖೆ ನಡೆಸುವಂತೆ ಲೋಕಾಯುಕ್ತ ಎಸ್ಪಿಗೆ ಸೂಚನೆ ನೀಡಿದ್ದರು. ಈ ಸಂಬಂಧ ಡಿ.17ರಂದು ಎಫ್ಐಆರ್ ದಾಖಲಾಗಿತ್ತು. 2012ರ ಮಾರ್ಚ್ 16ರಂದು ಶಾಂತಕುಮಾರಿ ಅವರ ವಾಸದ ಮನೆ, ಸಂಬಂಧಿಕರ ಮನೆ ಮೇಲೆ ದಾಳಿ ನಡೆಸಿ ಕೇಸಿಗೆ ಸಂಬಂಧಿಸಿದ ನಗದು ಹಾಗೂ ದಾಖಲಾತಿಗಳನ್ನು ಜಪ್ತಿ ಮಾಡಲಾಗಿತ್ತು.
ಬಿಬಿಎಂಪಿ ಚುನಾವಣೆಯಲ್ಲಿ ಶಾಂತಕುಮಾರಿ ಅವರು ಬಿಜೆಪಿ ಅಭ್ಯರ್ಥಿಯಾಗಿ ಮಾರುತಿ ಮಂದಿರ ವಾರ್ಡ್‍ನಿಂದ ಸ್ಪರ್ಧಿಸಿದ್ದಾರೆ. ಚುನಾವಣಾ ಸಮಯದಲ್ಲಿಯೇ ಆರೋಪ ಪಟ್ಟಿ ಸಲ್ಲಿಕೆ ಆಗಿರುವುದು ವಿರೋಧಿಗಳಿಗೆ ಅಸ್ತ್ರ ಸಿಕ್ಕಂತೆ ಆಗಲಿದೆ.
Advertisement