
ಜೈಪುರ: ಐಪಿಎಲ್ ಹಗರಣದ ಆರೋಪಿ ಲಲಿತ್ ಮೋದಿಯನ್ನು ವಶಕ್ಕೆ ಪಡೆಯಲು ಕೇಂದ್ರ ಸರ್ಕಾರ ಮುಂದಾಗಿದ್ದು, ಈ ಸಂಬಂಧ ಮಾಜಿ ಐಪಿಎಲ್ ಮುಖ್ಯಸ್ಥನ ವಿರುದ್ಧ ಶೀಘ್ರವೇ ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡುವ ಸಾಧ್ಯತೆ ಇದೆ.
'ಈ ಹಿಂದಿನ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಲಲಿತ್ ಮೋದಿ ವಿರುದ್ಧ ಯಾವುದೇ ಸೂಕ್ತ ಕ್ರಮ ತೆಗೆದುಕೊಂಡಿಲ್ಲ. ಆದರೆ ಈ ಮೋದಿ ಸರ್ಕಾರ ಸೂಕ್ತ ಕ್ರಮ ತೆಗೆದುಕೊಳ್ಳಲಿದೆ' ಎಂದು ಮಾಹಿತಿ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವ ರಾಜವರ್ಧನ್ ರಾಥೋಡ್ ಅವರು ಹೇಳಿದ್ದಾರೆ.
ಯುಪಿಎ ಸರ್ಕಾರ ಲಿಲತ್ ಮೋದಿ ವಿರುದ್ಧ ಕೇವಲ ವಿದೇಶಿ ವಿನಿಮಯ ಕಾಯ್ದೆಯಡಿ ಮಾತ್ರ ಕೇಸ್ ದಾಖಲಿಸಿತ್ತು. ಈ ಪ್ರಕರಣದಡಿ ಆರೋಪಿಯನ್ನು ಬಂಧಿಸಲು ಬರುವುದಿಲ್ಲ. ಅಲ್ಲದೆ ಮೋದಿ ವಿರುದ್ಧ ಬ್ಲೂ ಕಾರ್ನರ್ ನೋಟಿಸ್ ಮಾತ್ರ ಜಾರಿ ಮಾಡಲಾಗಿತ್ತು. ಈ ನೋಟಿಸ್ ಕೇವಲ ವಿಮಾನ ನಿಲ್ದಾಣಗಳಿಗೆ ಮಾತ್ರ ಸೀಮಿತವಾಗಿದ್ದು, ಲಂಡನ್‌ನಲ್ಲಿರುವ ಲಲಿತ್ ಮೋದಿಯನ್ನು ವಾಪಸ್ ಕರೆತರಲು ಹೇಗೆ ಸಾಧ್ಯ ಎಂದು ರಾಥೋಡ್ ಪ್ರಶ್ನಿಸಿದ್ದಾರೆ.
ಈಗ ಲಲಿತ್ ಮೋದಿ ವಿರುದ್ಧ ಜಾಮೀನು ರಹಿತ ವಾರಂಟ್ ಜಾರಿಯಾಗಿದ್ದು, ಆರೋಪಿಯನ್ನು ಭಾರತಕ್ಕೆ ಕರೆತರಲು ಸರ್ಕಾರ ಎಲ್ಲಾ ರೀತಿಯ ಪ್ರಯತ್ನ ಮಾಡಲಿದೆ ಮತ್ತು ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡಲಾಗುವುದು ಎಂದು ರಾಥೋಡ್ ವರದಿಗಾರರಿಗೆ ತಿಳಿಸಿದ್ದಾರೆ.
Advertisement