ನವದೆಹಲಿ: ಪಾಕಿಸ್ತಾನ ರಾಷ್ಟ್ರೀಯ ಭದ್ರತಾ ಸಲಹೆಗಾರ ಸರ್ತಜ್ ಅಜೀಜ್ ಅವರು ಹುರಿಯತ್ ಪ್ರತ್ಯೇಕವಾದಿಗಳನ್ನು ಭೇಟಿ ಮಾಡುವುದರಿಂದ ದೂರ ಉಳಿಯುವಂತೆ ಪಾಕಿಸ್ತಾನಕ್ಕೆ ಭಾರತ ಸ್ಪಷ್ಟ ಸೂಚನೆ ನೀಡಿದೆ. ಭಾರತದ ಭದ್ರತಾ ಸಲಹೆಗಾರ ಅಜಿತ್ ದೋವಲ್ ಜೊತೆ ಭಯೋತ್ಪಾದನೆ ಬಗ್ಗೆ ಚರ್ಚಿಸಲು ಭಾರತಕ್ಕೆ ಬರುತ್ತಿರುವ ಸರ್ತಜ್ ಅಜೀಜ್ ಅವರನ್ನು ಭೇಟಿ ಮಾಡಲು ಕಾಶ್ಮೀರಿ ಪ್ರತ್ಯೇಕವಾದಿಗಳಿಗೆ ಪಾಕಿಸ್ತಾನ ರಾಯಭಾರ ಕಚೇರಿ ಆಹ್ವಾನ ನೀಡಿತ್ತು. ಇದು ಸರಿಯಾದ ನಡೆಯಲ್ಲ ಎಂದು ಭಾರತ ಸರ್ಕಾರ ತಿಳಿಸಿದೆ.
"ಸರ್ತಜ್ ಅಜೀಜ್ ಅವರು ಹುರಿಯತ್ ಪ್ರತಿನಿಧಿಗಳನ್ನು ಭಾರತದಲ್ಲಿ ಭೇಟಿ ಮಾಡುವುದು ಸೂಕ್ತವಲ್ಲ ಎಂದು ಪಾಕಿಸ್ತಾನಕ್ಕೆ ನೆನ್ನೆ ಭಾರತ ಸಲಹೆ ನೀಡಿದೆ" ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ವಿಕಾಸ್ ಸ್ವರೂಪ್ ಟ್ವೀಟ್ ಮಾಡಿದ್ದಾರೆ.
ಆಗಸ್ಟ್ ೨೩ ರಂದು ಮೊದಲ ಬಾರಿಗೆ ಭಯೋತ್ಪಾದನೆ ಬಗ್ಗೆ ಚರ್ಚಿಸಲು ಎರಡು ದೇಶದ ಭದ್ರತಾ ಸಲಹೆಗಾರರು ದೆಹಲಿಯಲ್ಲಿ ಭೇಟಿ ಮಾಡಲಿದ್ದಾರೆ. ಈ ಭೇಟಿ ರಷ್ಯಾದ ಉಫಾದಲ್ಲಿ ಪ್ರಧಾನಿ ನರೇಂದ್ರ ಮೋದಿ, ಪಾಕಿಸ್ತಾನದ ಪ್ರಧಾನಿ ನವಾಜ್ ಶರೀಫ್ ಅವರನ್ನು ಭೇಟಿ ಮಾಡಿದ್ದಾಗ ನಿಗದಿಯಾಗಿತ್ತು.
ಅಜೀಜ್ ಅವರನ್ನು ಭೇಟಿ ಮಾಡಲು ಕಾಶ್ಮೀರಿ ಪ್ರತ್ಯೇಕವಾದಿ ಮುಖಂಡರಾದ ಸಯ್ಯದ ಅಲಿ ಷಾ ಗಿಲಾನಿ, ಉಮರ್ ಫಾರುಕ್ ಇವರುಗಳಿಗೆ ಆಹ್ವಾನ ನೀಡಿರುವುದು ಭಾರತಕ್ಕೆ ಇರುಸು ಮುರುಸು ತಂದು ಈ ಮಾತುಕತೆಗಳು ರದ್ದಾಗುವಂತೆ ನೋಡಿಕೊಳ್ಳಲು ಪಾಕಿಸ್ತಾನದ ತಂತ್ರ ಎಂದು ಬಣ್ಣಿಸಲಾಗಿದೆ. ಆದರೆ ಪಾಕಿಸ್ತಾನ ಇದನ್ನು ಅಲ್ಲಗೆಳೆದಿದ್ದು ಇದರಲ್ಲಿ ವಿಶೇಷವೇನಿಲ್ಲ. ಇವುಗಳು ಸಾಮಾನ್ಯವಾಗಿ ನಡೆಯುವ ಭೇಟಿಗಳು ಎಂದಿದೆ.
ಇದೇ ಕಾರಣಕ್ಕಾಗಿ ಕಳೆದ ವರ್ಷ ಈ ಮಾತುಕತೆಗಳು ರದ್ದಾಗಿದ್ದವು.
Advertisement