
ಬೆಂಗಳೂರು: ಡಿಸೆಂಬರ್ ೫ ಮತ್ತು ಡಿಸೆಂಬರ್ ೬ ರಂದು ಜರುಗಲಿರುವ ಇಂಗ್ಲಿಶ್ ಭಾಷೆಯ ಸಾಹಿತ್ಯದತ್ತ ಕೇಂದ್ರೀಕೃತವಾಗಿರುವ ಬೆಂಗಳೂರು ಸಾಹಿತ್ಯ ಉತ್ಸವ ಈಗ ವಿವಾದದ ಕೇಂದ್ರವಾಗಿದ್ದು ಹಲವಾರು ಹಿರಿಯ ಮತ್ತು ಕಿರಿಯ ಲೇಖಕರು ಭಾಗಿಯಾಗಲು ನಿರಾಕರಿಸಿರುವುದರಿಂದ ಮೊದಲು ನಿಗದಿಯಾಗಿದ್ದ ಕಾರ್ಯಕ್ರಮಗಳಿಗೆ ಭಾರಿ ಬದಲಾವಣೆಗಳನ್ನು ತರಲಾಗಿದೆ.
ವಿವಾದಗಳ ಸುತ್ತ ಒಂದು ನೋಟ.
* ಈ ಉತ್ಸವದ ಸಂಸ್ಥಾಪಕ ಸದಸ್ಯರಾದ ವಿಕ್ರಮ್ ಸಂಪತ್ ಪ್ರಶಸ್ತಿ ವಾಪಸಾತಿಯ ಬಗ್ಗೆ ವಿರೋಧ ವ್ಯಕ್ತತಪಡಿಸಿ, ಪ್ರಶಸ್ತಿ ವಾಪಸಾತಿ ಮಾಡಿದ ಲೇಖಕರು ರಾಜಕೀಯ ಕೈಗೊಂಬೆಗಳು ಎಂಬ ಅರ್ಥದಲ್ಲಿ ಬರೆದ ಲೇಖನದಿಂದ, ಉತ್ಸವದಲ್ಲಿ ಭಾಗವಹಿಸಲು ಒಪ್ಪಿಕೊಂಡಿದ್ದ ಹಲವಾರು ಲೇಖಕರ ಅಸಮಧಾನ.
* ಕನ್ನಡದ ಯುವ ಬರಹಗಾರರಾದ ಟಿ ಕೆ ದಯಾನಂದ್ ಮತ್ತು ಆರಿಫ್ ರಾಜ ಈ ಕಾರಣ ಮುಂದೊಡ್ಡಿ, ಉತ್ಸವದಲ್ಲಿ ಭಾಗವಹಿಸುವುದಿಲ್ಲ ಎಂದು ಆಯೋಜಕರಿಗೆ ಪತ್ರ.
* ಹಿರಿಯ ಲೇಖಕ ವಿಮರ್ಶಕ ಓ ಎಲ್ ನಾಗಭೂಷಣ ಸ್ವಾಮಿ ಅವರು ಕೂಡ ಭಾಗವಹಿಸಲು ಒಂದು ದಿನದ ನಂತರ ನಿರಾಕರಣೆ. ಪ್ರಶಸ್ತಿ ವಾಪಸಾತಿಯ ನಡೆಯುತ್ತಿರುವುದು ಏಕೆ ಎಂದು ಒಂದು ಕ್ಷಣ ನಿಂತು ಯೋಚಿಸಲು ಬಾರದ ಆಯೋಜಕರು ಮತ್ತು ಕನ್ನಡ ಸಾಹಿತ್ಯಕ್ಕೆ ಪ್ರಾಶಸ್ತ್ಯ ನೀಡದ ಉತ್ಸವದಿಂದ ಹಿಂದುಳಿಯಲು ನಿರ್ಧಾರ.
* ಲೇಖಕರು ಭಾಗವಹಿಸದೆ ಇರುವುದೇ 'ಅಸಹಿಷ್ಣುತೆ' ಎಂದು ಪತ್ರ ಬರೆದು ಕಾರ್ಯಕ್ರಮ ಆಯೋಜನೆಯಿಂದ ಕೆಳಗಿಳಿದ ವಿಕ್ರಂ ಸಂಪತ್.
* ಹಿರಿಯ ಲೇಖಕ ಗೀತರಚನಕಾರ ಜಾವೇದ್ ಅಖ್ತರ್, ರಾಜಕಾರಿಣಿ-ಲೇಖಕ ಜೈರಾಮ್ ರಮೇಶ್ ಮತ್ತು ಮಲಯಾಳಮ್ ಲೇಖಕಿ ಸಾರಾ ಜೋಸೆಫ್ ಕೂಡ ಭಾಗವಹಿಸದಿರಲು ನಿರ್ಧಾರ.
* ಬೇರೆ ಕಾರಣಗಳಿಗಾಗಿ ಉತ್ಸವದಿಂದ ದೂರ ಉಳಿದ ಕನ್ನಡ ನಿರ್ದೇಶಕ ಟಿ ಎನ್ ಸೀತಾರಂ.
ಬೆಂಗಳೂರು ಸಾಹಿತ್ಯ ಉತ್ಸವ ಹೆಚ್ಚೆಚ್ಚು ಕೇಸರೀಕರಣಗೊಳ್ಳುತ್ತಿದ್ದೆ ಎಂಬ ಆರೋಪ ಕೂಡ ಹಲವೆಡೆಗಳಿಂದ ಕೇಳಿ ಬಂದ ಹಿನ್ನಲೆಯಲ್ಲಿ ಕಾರ್ಯಕ್ರಮದ ರೂಪುರೇಶೆಗಳಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದ್ದು, ಈಗ ಹೊಸದಾಗಿ ಖ್ಯಾತ ಇತಿಹಾಸಕಾರ ರಾಮಚಂದ್ರ ಗುಹಾ ಭಾಗವಹಿಸುವ ಲೇಖಕರ ಪಟ್ಟಿಯಲ್ಲಿ ಸೇರ್ಪಡೆಯಾಗಿದ್ದಾರೆ. ಕನ್ನಡದ ಪ್ರಾಶಸ್ತ್ಯದ ಬಗ್ಗೆ ಹೆಚ್ಚಿನ ಬದಲಾವಣೆಗಳು ಕಂಡುಬಂದಿಲ್ಲ. ಟಿಪ್ಪು ಸುಲ್ತಾನ್ ಬಗೆಗಿದ್ದ ಚರ್ಚೆಗೆ ಕೃಷ್ಣಮೂರ್ತಿ ಹನೂರ್ ಅವರ ಹೆಸರು ಸೇರ್ಪಡೆಯಾಗಿದೆ. 'ಅಸಹಿಷ್ಣುತೆ' ಬಗೆಗಿನ ಚರ್ಚೆಗೆ ಅಂಕಣಕಾರ ಆಕರ್ ಪಟೇಲ್ ಹೆಸರು ಹೊಸದಾಗಿ ಮೂಡಿ ಬಂದಿದೆ. ಹೀಗೆ ಬದಲಾವಣೆಗಳು ಕಂಡು ಬಂದಿದ್ದರು ಬೆಂಗಳೂರಿನಲ್ಲಿ ನಡೆಯುವ ಉತ್ಸವಕ್ಕೆ ಕನ್ನಡದ ಕಂಪೆ ಇಲ್ಲ ಎಂಬುದು ಸಾಹಿತ್ಯಾಭಿಮಾನಿಗಳ ಅಸಮಧಾನ.
Advertisement