ಚೆನ್ನೈ ಪ್ರವಾಹ: ಪ್ರಕೃತಿ ವಿಕೋಪ ಅಲ್ಲ, ಮಾನವ ನಿರ್ಮಿತ ವಿಕೋಪ

ಇದೀಗ ಚೆನ್ನೈಯಲ್ಲಿ ಪ್ರವಾಹ ಬಂದಿದೆ. ಇದು ಪ್ರಕೃತಿ ವಿಕೋಪವೇ? ಅಲ್ಲ ಇದು ಮಾನವ ನಿರ್ಮಿತ! ಎಂಬುದಕ್ಕೆ ಇಲ್ಲಿದೆ ಸಾಕ್ಷಿ.
ನೀರಿನಿಂದಾವೃತವಾಗಿರುವ ಚೆನ್ನೈ ವಿಮಾನ ನಿಲ್ದಾಣ
ನೀರಿನಿಂದಾವೃತವಾಗಿರುವ ಚೆನ್ನೈ ವಿಮಾನ ನಿಲ್ದಾಣ
ನಾವು ವಾಸಿಸುವ ಸ್ಥಳದಲ್ಲಿ ಗಿಡಮರಗಳು, ಬಯಲು ಪ್ರದೇಶವಿದ್ದರೆ ಮಳೆ ನೀರು ಹರಿದು ಹೋಗುತ್ತಿತ್ತು, ಇಲ್ಲವೇ ಇಂಗುತ್ತಿತ್ತು. ಆದರೆ ಕಾಂಕ್ರೀಟು ಕಾಡುಗಳಲ್ಲಿ  ಮಳೆ ನೀರು ಹರಿದು ಹೋಗಲು ಜಾಗವೆಲ್ಲಿದೆ ಹೇಳಿ? ಇದೀಗ ಚೆನ್ನೈಯಲ್ಲಿ ಪ್ರವಾಹ ಬಂದಿದೆ. ಇದು ಪ್ರಕೃತಿ ವಿಕೋಪವೇ? ಅಲ್ಲ ಇದು ಮಾನವ ನಿರ್ಮಿತ! ಎಂಬುದಕ್ಕೆ ಇಲ್ಲಿದೆ ಸಾಕ್ಷಿ.
ಈ ವರ್ಷ ಮುಂಗಾರು ಆಗಮನ ಬೇಗನೇ ಆಗಿತ್ತು. ಅಷ್ಟೊತ್ತಿಗೆ ಚೆನ್ನೈ ಕಾರ್ಪರೇಷನ್  1,860 ಕಿಮಿ ಉದ್ದದ ಚರಂಡಿಯಿಂದ 6,200 ಮೆಟ್ರಿಕ್ ಟನ್ ಹೂಳು ಎತ್ತಿತ್ತು. ಆದರೆ ಇದ್ಯಾವುದೇ ಕ್ರಿಯೆಗಳು ನೀರು ಹರಿದು ಹೋಗಲು ಸಹಾಯ ಮಾಡಲಿಲ್ಲ. ಅಂದರೆ ಚೆನ್ನೈ ನಗರ ಅಭಿವೃದ್ಧಿ ಮಾಡುವಾಗ ಸರಿಯಾದ ಮುಂದಾಲೋಚನೆ ಇಲ್ಲದೆ ಕಟ್ಟಡಗಳನ್ನು ಕಟ್ಟಿರುವುದೇ ಈ ಎಲ್ಲ ಅನಾಹುತಕ್ಕೆ ಕಾರಣ ಎಂದು ಹೇಳಲಾಗುತ್ತದೆ.
ಮೂಲತಃ ಚೆನ್ನೈ ಜಲಾಶಯಗಳಿಂದಾವೃತ ಪ್ರದೇಶ. ಇದೀಗ ಇಲ್ಲಿ  ವೆಲಾಚೇರಿ, ಪಲ್ಲಿಕರಣೈ, ಮತ್ತು ಓಲ್ಡ್ ಮಹಾಬಲಿಪುರಂ ರೋಡ್ (ಒಎಂಆರ್ ) ಮೊದಲಾದ ಪ್ರದೇಶಗಳು ಸೇರಿರುವ 5,550 ಹೆಕ್ಟೇರ್‌ಗಳಷ್ಟು ಭೂಮಿಯಲ್ಲಿ ಐಟಿ ಕಾರಿಡಾರ್ ನಿರ್ಮಾಣವಾಗಿದೆ. 
ಚೆನ್ನೈ ನಗರ ಪ್ರದೇಶದಲ್ಲಿ ಪೊನ್ನೇರಿ ಎಂಬ ಗ್ರಾಮವಿದೆ. ಏರಿ ಎಂದರೆ ಶುದ್ಧ ಜಲಾಶಯ  ಎಂದು ಅರ್ಥ. ಕಳೆದ ವಾರ ಪೊನ್ನೇರಿಯಲ್ಲಿ 37 ಸೆ.ಮೀ ಮಳೆ ಬಿದ್ದಿದೆ. ಇಷ್ಟೊಂದು ಮಳೆ ಬೀಳುತ್ತಿರುವ ಪೊನ್ನೇರಿಯಲ್ಲಿ ಸ್ಮಾರ್ಟ್ ಸಿಟಿ ನಿರ್ಮಾಣಕ್ಕೆ ತಮಿಳ್ನಾಡು ಸರ್ಕಾರ ಯೋಚಿಸಿದೆ. ಅಂದರೆ ಚೆನ್ನಾಗಿ ಮಳೆ ಬೀಳುತ್ತಿರುವ ಪ್ರದೇಶವೊಂದರಲ್ಲಿ ಸ್ಮಾರ್ಟ್ ಸಿಟಿ  ನಿರ್ಮಿಸಿದರೆ ಏನಾಗುತ್ತದೆ ಎಂಬುದನ್ನು ಅಲ್ಲಿನ ಇಂಜಿನಿಯರ್‌ಗಳು ಗಮನಿಸಬೇಕು.
(ಚೆನ್ನೈ  ವಿಮಾನ ನಿಲ್ದಾಣ 2000 ಇಸ್ವಿಯಲ್ಲಿ ಮತ್ತು  2015ರಲ್ಲಿ )
ಅದೇ ವೇಳೆ ಎನ್ನೂರಿನಲ್ಲಿ ಹಲವಾರು ಜಲಮೂಲಗಳನ್ನು ನಾಶಗೊಳಿಸಿ ಅಲ್ಲಿ ಹೊಸ ಬಂದರು ಸ್ಥಾಪಿಸಲಾಗಿತ್ತು. ಕೊಯಮ್ಮೇಡ್ ಬಸ್ ನಿಲ್ದಾಣ ನಿರ್ಮಿಸಲು ಕೆರೆಯೊಂದನ್ನು ಮುಚ್ಚಲಾಗಿತ್ತು.  ಅಡಯಾರ್ ನದಿಯನ್ನು ಮುಚ್ಚಿ ವಿಮಾನ ನಿಲ್ದಾಣ ಅಭಿವೃದ್ಧಿ ಪಡಿಸಲಾಗಿತ್ತು. ಜಲ ಸಮೃದ್ಧಿಯಿಂದ ಕೂಡಿದ ಪಳ್ಳಿಕ್ಕರಣದಲ್ಲಿ ಎನ್ ಐಒ ಸ್ಥಾಪಿಸಿದ ನಂತರ, ರಿಯಲ್ ಎಸ್ಟೇಟ್ ಇಲ್ಲಿ ಹೆಚ್ಚು ಬೆಳವಣಿಗೆ ಹೊಂದಿದೆ. ಕಾಲುವೆಯನ್ನು ಮುಚ್ಚಿ ಸ್ಥಾಪಿಸಿದ ಇಂಜಿನಿಯರಿಂಗ್ ಕಾಲೇಜು ಇಲ್ಲಿದೆ.
(ಅಣ್ಣಾ ನಗರ್ 2000 ಇಸ್ವಿಯಲ್ಲಿ ಮತ್ತು  2015ರಲ್ಲಿ )
ಕೂವಂ ನದಿಯ ಒಂದು ಭಾಗವನ್ನು ಮುಚ್ಚಿ ಚೆನ್ನೈ ಬಂದರು ಮತ್ತು ಮಧುರವೋಯಲ್ ನಲ್ಲಿ ಎಲಿವೇಟೆಡ್ ಎಕ್ಸ್ ಪ್ರೆಸ್ ಹೈವೇ ನಿರ್ಮಿಸಿದ್ದಾರೆ.  120ಎಕರೆಗಳಿಷ್ಟಿದ್ದ ಮಧುರವೋಯಿಲ್ ಜಲಾಶಯವೀಗ 25 ಹೆಕ್ಟರ್ ಆಗಿ ಕುಗ್ಗಿದೆ. ಬಕಿಂಗ್ ಹಾಮ್  ಜಲಾಶಯದ ಅಗಲ 25 ಮೀಟರ್ ಇದ್ದದ್ದು 10 ಮೀಟರ್ ಆಗಿದೆ. 
(ಅಡಯಾರ್ 2000 ಇಸ್ವಿಯಲ್ಲಿ ಮತ್ತು  2015ರಲ್ಲಿ )
ಈ ಪ್ರದೇಶಗಳಲ್ಲಿ ರಿಯಲ್ ಎಸ್ಟೇಟ್ ಭಾರೀ ಬಿರುಸಾಗಿ ಸಾಗುತ್ತಿದೆ. ಆದ್ದರಿಂದಲೇ ಸ್ವಲ್ಪ ಮಳೆ ಬಂದರೂ ಚೆನ್ನೈ ಆ ಮಳೆಗೆ ತತ್ತರಿಸಿ ಹೋಗುತ್ತದೆ.
ಚೆನ್ನೈ ಅಭಿವೃದ್ಧಿ ಗೊಳ್ಳುತ್ತಿರುವ ನಗರ ನಿಜ. 2000 ಇಸ್ವಿಯಲ್ಲಿ ಚೆನ್ನೈನ ಕೆಲವು ಪ್ರದೇಶಗಳು ಹೇಗಿದ್ದವು? ಈಗ ಹೇಗಾಗಿದೆ? ಎಂಬುದಕ್ಕೆ  ಗೂಗಲ್ ಅರ್ಥ್ ಮೂಲಕ ಸಿಕ್ಕ ಈ ಚಿತ್ರಗಳೇ ಸಾಕ್ಷಿ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com