
ಬೆಂಗಳೂರು: ನ್ಯಾಯಮೂರ್ತಿ ವೈ.ಭಾಸ್ಕರ ರಾವ್ ಅವರ ರಾಜೀನಾಮೆಯಿಂದ ತೆರವಾಗಿರುವ ಲೋಕಾಯುಕ್ತ ಸ್ಥಾನಕ್ಕೆ ಸುಪ್ರೀಂಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ, ಕನ್ನಡಿಗ ಎಚ್.ಎಲ್.ದತ್ತು ಅವರ ಹೆಸರು ಪ್ರಮುಖವಾಗಿ ಕೇಳಿಬರುತ್ತಿದೆ.
ನೂತನ ಲೋಕಾಯುಕ್ತ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡಿ. 21ರಂದು ಉನ್ನತ ಮಟ್ಟದ ಸಭೆ ಕರೆದಿದ್ದು, ಈ ಸಭೆಯಲ್ಲಿ ಎಚ್.ಎಲ್.ದತ್ತು ಹೆಸರು ಪ್ರಸ್ತಾಪವಾಗುವ ಸಾಧ್ಯತೆ ಇದೆ. ಒಂದು ವೇಳೆ ಎಲ್ಲರೂ ಒಪ್ಪಿಗೆ ಸೂಚಿಸಿದರೆ ಬಹುತೇಕ ದತ್ತು ಅವರ ಹೆಸರು ಅಂತಿಮವಾಗುವ ಸಾಧ್ಯತೆ ಹೆಚ್ಚಾಗಿದೆ ಎನ್ನಲಾಗಿದೆ.
ಲೋಕಾಯುಕ್ತರ ನೇಮಕ ಕುರಿತಂತೆ ತಾವು, ಉಭಯ ಸದನಗಳ ಸ್ಪೀಕರ್ ಮತ್ತು ಸಭಾಪತಿ, ವಿಪಕ್ಷ ನಾಯಕರು, ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳನ್ನೊಳಗೊಂಡ ಉನ್ನತ ಮಟ್ಟದ ಸಮಿತಿ ಇದ್ದು, ಡಿ. 21ರಂದು ಈ ಸಮಿತಿಯ ಸಭೆ ಕರೆಯಲಾಗಿದೆ. ಅದರಲ್ಲಿ ನೂತನ ಲೋಕಾಯುಕ್ತರ ನೇಮಕ ಕುರಿತು ಚರ್ಚಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದ್ದಾರೆ.
ಇತ್ತೀಚೆಗಷ್ಟೆ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ನಿವೃತ್ತಿಯಾಗಿರುವ ಎಚ್.ಎಲ್.ದತ್ತು ಅವರನ್ನೇ ಮುಂದಿನ ಲೋಕಾಯುಕ್ತ ನ್ಯಾಯಮೂರ್ತಿಯನ್ನಾಗಿ ನೇಮಕ ಮಾಡಲು ತೆರೆಮರೆ ಪ್ರಯತ್ನ ಆರಂಭವಾಗಿದೆ. ಅಲ್ಲದೆ ಲೋಕಾಯುಕ್ತ ಹುದ್ದೆ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಾಗಿದ್ದ ಎಸ್.ಆರ್.ನಾಯಕ್ ಅವರು ಹೆಸರು ಕೂಡ ಕೇಳಿ ಬರುತ್ತಿದ್ದು, ಇಬ್ಬರು ನ್ಯಾಯಮೂರ್ತಿಗಳ ಮೇಲೆ ಯಾವುದೇ ವಿವಾದವಿಲ್ಲ.
ಲೋಕಾಯುಕ್ತ ಮತ್ತು ಉಪಲೋಕಾಯುಕ್ತ ಹೆಸರುಗಳನ್ನು ಅಂತಿಮಗೊಳಿಸುವ ಮುನ್ನ ಅವರ ಪೂರ್ವಾಪರ, ಹಿನ್ನೆಲೆ, ಆರೋಪಗಳು ಎಲ್ಲವನ್ನೂ ಪರಿಗಣಿಸಿಯೇ ಹೆಸರನ್ನು ಶಿಫಾರಸು ಮಾಡಲು ಸರ್ಕಾರ ಮುಂದಾಗಿದೆ. ಏಕೆಂದರೆ, ಈಗಾಗಲೇ ಕೆಲವು ಹೆಸರುಗಳು ತಿರಸ್ಕೃತವಾಗಿದ್ದರಿಂದ ಸರ್ಕಾರಕ್ಕೆ ಮುಜುಗರವಾಗಿತ್ತು. ಈ ಹಿನ್ನೆಲೆಯಲ್ಲಿ ಯಾವುದೇ ಗೊಂದಲಕ್ಕೆ ಅವಕಾಶವಿಲ್ಲದಂತೆ ಆರ್ಹರಾದವರನ್ನೇ ಈ ಸ್ಥಾನಕ್ಕೆ ಆಯ್ಕೆ ಮಾಡಲು ಸರ್ಕಾರ ಇನ್ನಿಲ್ಲದ ಕಸರತ್ತು ನಡೆಸಿದೆ.
Advertisement