ಉಪ ಲೋಕಾಯುಕ್ತರಾಗಿ ನ್ಯಾ.ಆನಂದ್ ನೇಮಕ
ಬೆಂಗಳೂರು: ಹೈಕೋರ್ಟ್ ನಿವೃತ್ತಿ ನ್ಯಾಯಮೂರ್ತಿ ನಾರಾಯಣಪ್ಪ ಆನಂದ್ ಅವರು ಸೋಮವಾರ ನೂತನ ಉಪ ಲೋಕಾಯುಕ್ತರಾಗಿ ನೇಮಕಗೊಂಡಿದ್ದಾರೆ.
ಉಪ ಲೋಕಾಯುಕ್ತರಾಗಿ ಕಾರ್ಯನಿರ್ವಹಿಸುತ್ತಿದ್ದ ನ್ಯಾಯಮೂರ್ತಿ ಮಜಗೆ ಅವರ ನಿವೃತ್ತಿಯಿಂದ ತೆರವಾಗಿದ್ದ ಸ್ಥಾನಕ್ಕೆ ರಾಜ್ಯ ಸರ್ಕಾರ ನ್ಯಾ.ಆನಂದ್ ಅವರ ಹೆಸರನ್ನು ಶಿಫಾರಸು ಮಾಡಿತ್ತು. ರಾಜ್ಯ ಸರ್ಕಾರದ ಶಿಫಾರಸಿಗೆ ರಾಜ್ಯಪಾಲ ವಜುಭಾಯಿ ವಾಲಾ ಅವರು ಇಂದು ತಮ್ಮ ಅಂಕಿತ ಹಾಕಿದ್ದಾರೆ.
ನ್ಯಾ. ಕೆ.ಎಲ್. ಮಂಜುನಾಥ್ ಅವರ ನೇಮಕಕ್ಕೆ ಪಟ್ಟು ಹಿಡಿದು, ರಾಜ್ಯಪಾಲರಿಂದ ಮೂರು ಬಾರಿ ಮುಖಭಂಗ ಅನುಭವಿಸಿದ್ದ ರಾಜ್ಯಸರಕಾರ, ಕೊನೆಗೆ ನ್ಯಾ. ಆನಂದ್ ಅವರ ಹೆಸರನ್ನು ಶಿಫಾರಸು ಮಾಡಿತ್ತು.
1953, ಮೇ 8ರಂದು ಕೋಲಾರ ಜಿಲ್ಲೆಯ ಬ್ಯಾದನಹಳ್ಳಿಯಲ್ಲಿ ಜನಿಸಿದ ನ್ಯಾ.ಆನಂದ್ ಅವರು ಕಳೆದ ಜುಲೈನಲ್ಲಿ ಹೈಕೋರ್ಟ್ ನಿಂದ ನಿವೃತ್ತಿಯಾಗಿದ್ದರು. ನೇರ ನಡೆ, ನುಡಿಗೆ ಹೆಸರಾಗಿರುವ ಆನಂದ್ ಅವರು, ರಿಂಗ್ ರೋಡ್ ಶುಭಾ ಹಾಗೂ ಸ್ವಾಮಿ ನಿತ್ಯಾನಂದ ಲೈಂಗಿಕ ಹಗರಣ ಸೇರಿದಂತೆ ಸುಮಾರು 23 ಸಾವಿರಕ್ಕೂ ಹೆಚ್ಚು ಪ್ರಕರಣಗಳಲ್ಲಿ ತೀರ್ಪು ನೀಡಿದ್ದಾರೆ.

