ಮರಳುದಂಧೆಕೋರರಿಂದ ಹಲ್ಲೆ: ಮಂಡ್ಯದಲ್ಲಿ ಉಪವಿಭಾಗಾಧಿಕಾರಿ, ಎಸ್ಸೈಗೆ ಜೀವ ಬೆದರಿಕೆ

ಮಂಡ್ಯ ಜಿಲ್ಲೆಯಲ್ಲಿ ಮರಳು ದಂಧೆಕೋರರು ಮತ್ತೆ ಚಿಗಿತುಕೊಂಡಿದ್ದಾರೆ. ಪಾಂಡವಪುರ ತಾಲೂಕಿನಲ್ಲಿ ಅಕ್ರಮ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಮಂಡ್ಯ/ಪಾಂಡವಪುರ: ಮಂಡ್ಯ ಜಿಲ್ಲೆಯಲ್ಲಿ ಮರಳು ದಂಧೆಕೋರರು ಮತ್ತೆ ಚಿಗಿತುಕೊಂಡಿದ್ದಾರೆ. ಪಾಂಡವಪುರ ತಾಲೂಕಿನಲ್ಲಿ ಅಕ್ರಮ ಮರಳು ಗಣಿಗಾರಿಕೆ ಅಡ್ಡೆ ಮೇಲೆ ದಾಳಿ ನಡೆಸಿದ ಉಪವಿಭಾಗಾ ಧಿಕಾರಿ ಮತ್ತು ಸಬ್‍ಇನ್ಸ್ ಪೆಕ್ಟರ್ ಮೇಲೆ ಹಲ್ಲೆನಡೆಸಿ, ಜೀವ ಬೆದರಿಕೆವೊಡ್ಡಿದ್ದಾರೆ. 
ಘಟನೆಯಲ್ಲಿ ಉಪ ವಿಭಾಗಾಧಿಕಾರಿ ಡಾ.ಎಚ್.ಎಲ್.ನಾಗರಾಜು ಬಲಗೈ ಬೆರಳಿಗೆ ಹಾಗೂ ಸಬ್ ಇನ್ಸ್ ಪೆಕ್ಟರ್ ಅಯ್ಯನ ಗೌಡರಿಗೆ ತರಚಿದ ಗಾಯಗಳಾಗಿವೆ. 
ಘಟನೆ ಹಿನ್ನಲೆ: ಕಣಿವೆಕೊಪ್ಪಲು, ಕನಗನಮರಡಿ, ಚಿಕ್ಕಬ್ಯಾಡರಹಳ್ಳಿ ವೃತ್ತದ ಸಮೀಪ ಸೇರಿದಂತೆ ಅನೇಕ ಕಡೆ ಬಳಗಿನ ಜಾವ ಅಕ್ರಮವಾಗಿ ಮರಳು ಗಣಿಗಾರಿಕೆ ನಡೆಯುತ್ತಿದ್ದು, ಇದಕ್ಕೆ ಪೊಲೀಸರು ಸಹಕಾರ ನೀಡುತ್ತಿರುವ ಕುರಿತು ದೂರುಗಳು ಬಂದಿದ್ದವು. ಈ ಸಂಬಂಧ ಉಪವಿಭಾಗಾಧಿಕಾರಿ ಡಾ.ಎಚ್.ಎಲ್ ನಾಗರಾಜು ಸೋಮವಾರ ಬೆಳಗ್ಗೆ ಚಿಕ್ಕಬ್ಯಾಡರಹಳ್ಳಿ ಪಕ್ಕದ ಮರಳು ಅಡ್ಡೆ ಮೇಲೆ ದಾಳಿ  ಆಗ ಸ್ಥಳದಲ್ಲಿದ್ದ ದೇವರಾಜುನನ್ನು ಬಂಧಿಸಿದ್ದಲ್ಲದೆ, ಮರಳು ತುಂಬಿದ ಒಂದು ಟಿಪ್ಪರ್, ಸ್ಕಾರ್ಪಿಯೋ ಹಾಗೂ ಒಂದು ಬೈಕ್ ವಶಕ್ಕೆ ತೆಗೆದುಕೊಂಡಿದ್ದರು. ಈ ಬಳಿಕ ಈ ವಾಹನಗಳನ್ನು ಸಬ್ ಇನ್ಸ್ ಪೆಕ್ಟರ್ ಅಯ್ಯನಗೌಡ ಅವರಿಗೆ ಒಪ್ಪಿಸಿ ಉಪವಿಭಾಗಾಧಿಕಾರಿ ಪಟ್ಟಣಕ್ಕೆ ವಾಪಸಾಗಿದ್ದರು. ಅಯ್ಯನಗೌಡ ಚಿಕ್ಕಬ್ಯಾಡರಹಳ್ಳಿಗೆ ತೆರಳುತ್ತಿದ್ದ ವೇಳೆ ಡಾ.ರಾಜ್‍ಕುಮಾರ್ ವೃತ್ತದಲ್ಲಿ 5 ಎತ್ತಿನಗಾಡಿಯಲ್ಲಿ ಮರಳು ಸಾಗಿಸುತ್ತಿರುವುದನ್ನು ಪ್ರಶ್ನಿಸಿದ್ದಾರೆ. ಆಗ ಮರಳು ದಂಧೆಕೋರರು ಸಬ್‍ಇನ್ಸ್ ಪೆಕ್ಟರ್ ರನ್ನು ಹಿಡಿದು ತಳ್ಳಾಡಿದ್ದಾರೆ. ವಿಷಯ ತಿಳಿದ ಉಪವಿಭಾಗಾಧಿಕಾರಿ ಸ್ಥಳಕ್ಕೆ ಧಾವಿಸಿ ಮರಳು ದಂಧೆಕೋರರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.
ಇದರಿಂದ ರೊಚ್ಚಿಗೆದ್ದ ಮರಳು ದಂಧೆಕೋರರು, ನಾಗರಾಜು ಅವರೊಂದಿಗೆ ಮಾತಿನ ಚಕಮಕಿ ನಡೆಸಿದರಲ್ಲದೆ ನೂಕಾಟ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಸಿದ್ದೇಗೌಡ ಎಂಬಾತ ನಾಗರಾಜುರ ಮೇಲೆ ಹಲ್ಲೆಯನ್ನೂ ನಡೆಸಿದ್ದಾನೆ. ತಕ್ಷಣ ಆತನನ್ನು ಬಂಧಿಸಲಾಯಿತು. 
ಪರವಿರೋಧ ಪ್ರತಿಭಟನೆ: ಉಪವಿಭಾಗಾಧಿಕಾರಿ ನಾಗರಾಜು ತಮ್ಮ ವಾಹನದಲ್ಲಿ ಮನೆಗೆ ತೆರಳುತ್ತಿದ್ದಾಗ ಬಿಜೆಪಿ ಮುಖಂಡರಾದ ಎಚ್.ಎನ್. ಮಂಜುನಾಥ್ ಮತ್ತು ಶಿವಲಿಂಗೇಗೌಡ ತಡೆದು ನಿಲ್ಲಿಸಿ ಸಿದ್ದೇಗೌಡನ ಬಿಡುಗಡೆಗೆ ಒತ್ತಾಯಿಸಿದ್ದಾರೆ. ಆಗ ಮಾತಿನ ಚಕಮಕಿಯೂ ನಡೆದು ರಸ್ತೆತಡೆಯನ್ನೂ ಮಾಡಿದ್ದಾರೆ. ಈ ನಡುವೆ, ಉಪವಿಭಾಗಾಧಿಕಾರಿ ಮೇಲಿನ ಹಲ್ಲೆಖಂಡಿಸಿ ತಾಲೂಕು ಸರ್ಕಾರಿ ನೌಕರರ ಸಂಘ, ತಾಲೂಕು ಕಚೇರಿ ಸಿಬ್ಬಂದಿ, ಉಪವಿಭಾಗಾಧಿಕಾರಿ ಕಚೇರಿ ಸಿಬ್ಬಂದಿ, ವಿವಿಧ ಇಲಾಖೆಯ ಸರ್ಕಾರಿ ನೌಕರರು ಕರ್ತವ್ಯದಿಂದ ದೂರ ಉಳಿದು ಮಿನಿ ವಿಧಾನಸೌಧದ ಎದುರು ಕೆಲಕಾಲ ಧರಣಿ ನಡೆಸಿದರು. ಹಲ್ಲೆ ಮಾಡಿದವರನ್ನು ಶಿಕ್ಷೆಗೆ ಗುರಿಪಡಿಸಬೇಕೆಂದು ಒತ್ತಾಯಿಸಿ ತಹಸೀಲ್ದಾರ್ ಶಂಕರಯ್ಯ ಅವರಿಗೆ ಮನವಿಯನ್ನೂ ಸಲ್ಲಿಸಿದರು. 
ಆರು ಮಂದಿ ವಿರುದ್ಧ ಪ್ರಕರಣ: ಉಪವಿಭಾಗಾಧಿಕಾರಿ, ಎಸ್ಸೈ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಪಾಂಡವಪುರ ಪೊಲೀಸ್ ಠಾಣೆಯಲ್ಲಿ ಆರುಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ. ಚಿಕ್ಕಬ್ಯಾಡರಹಳ್ಳಿಯ ಕೃಷ್ಣೇಗೌಡ, ಸಿದ್ದೇಗೌಡ, ದೇವರಾಜು, ಬ್ರಹ್ಮೇಶ್ , ಸುರೇಶ್ ಹಾಗೂ ಶರತ್ ಕುಮಾರ್ ವಿರುದ್ಧ ಎಫ್ ಐಆರ್ ದಾಖಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com