
ನವದೆಹಲಿ: 2012 ಡಿಸೆಂಬರ್ 16ರಂದು ದೆಹಲಿಯಲ್ಲಿ ನಡೆದ ನಿರ್ಭಯಾ ಸಾಮೂಹಿಕ ಅತ್ಯಾಚಾರ ಪ್ರಕರಣದ ಅಪರಾಧಿ, ಅಪ್ರಾಪ್ತ ಬಾಲಕನ ಬಿಡುಗಡೆಗೆ ತಡೆ ನೀಡಲು ದೆಹಲಿ ಹೈಕೋರ್ಟ್ ಶುಕ್ರವಾರ ನಿರಾಕರಿಸಿದ್ದು, ಬಾಲಪರಾಧಿಯನ್ನು ಭಾನುವಾರ ಬಂಧಮುಕ್ತಗೊಳಿಸಲಾಗುತ್ತಿದೆ.
ನಿರ್ಭಯಾ ಅತ್ಯಾಚಾರ ಪ್ರಕರಣದಲ್ಲಿ ಮೂರು ವರ್ಷಗಳ ಜೈಲು ಶಿಕ್ಷೆ ಮುಗಿಸಿರುವ ಬಾಲಪರಾಧಿಯ ಬಿಡುಗಡೆಗೆ ತಡೆ ಕೋರಿ ಬಿಜೆಪಿ ನಾಯಕ ಸುಬ್ರಮಣ್ಯನ್ ಸ್ವಾಮಿ ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್ ಇಂದು ವಜಾಗೊಳಿಸಿದೆ. ಅಲ್ಲದೆ ಬಾಲಪರಾಧಿಯ ಶಿಕ್ಷೆಯನ್ನು ಹೆಚ್ಚಿಸಲು ಸಾಧ್ಯವಿಲ್ಲ ಎಂದು ಹೇಳಿದೆ.
ಬಾಲಾಪರಾಧಿ ಬಿಡುಗಡೆ ನಂತರ ಕೈಗೊಳ್ಳಬೇಕಾದ ಕ್ರಮಗಳ ಕುರಿತ ಯೋಜನಾ ವಿವರದಲ್ಲಿ ಕೆಲವೊಂದು ಪ್ರಮುಖ ಅಂಶಗಳೇ ಕಾಣೆಯಾಗಿವೆ. ಆ ಅಂಶಗಳು ಸೇರ್ಪಡೆಯಾಗುವವರೆಗೂ ಆತನ ಬಿಡುಗಡೆಯನ್ನು ಮುಂದೂಡಬೇಕು ಎಂದು ಸುಬ್ರಮಣ್ಯನ್ ಸ್ವಾಮಿ ವಾದಿಸಿದ್ದರು.
23 ವರ್ಷದ ಯುವತಿ ನಿರ್ಭಯಾಳ ಮೇಲೆ ರಾಷ್ಟ್ರ ರಾಜಧಾನಿಯಲ್ಲಿ ನಡೆದ ಬರ್ಬರ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ತಪ್ಪಿತಸ್ಥರೆಂದು ಸಾಬೀತಾಗಿ ಶಿಕ್ಷೆಗೊಳಗಾಗಿದ್ದ ಆರು ಅಪರಾಧಿಗಳ ಪೈಕಿ ಓರ್ವ ಅಪರಾಧಿ ಬಾಲಪರಾಧಿಯಾಗಿದ್ದ. ವಯಸ್ಸಿನ ಕಾರಣಕ್ಕೆ ಮರಣ ದಂಡನೆ, ಜೀವಾವಧಿ ಶಿಕ್ಷೆಯಿಂದ ಪಾರಾಗಿದ್ದ.
Advertisement