ನವದೆಹಲಿ: ``ಕೊನೆಗೂ ಅಪರಾಧವೇ ಗೆದ್ದಿತು, ನಾವು ಸೋತುಬಿಟ್ಟೆವು.'' ಬಾಲಾಪರಾಧಿಯ ಬಿಡುಗಡೆಗೆ ತಡೆಯಾಜ್ಞೆ ವಿಧಿಸಲು ಸಾಧ್ಯವಿಲ್ಲ ಎಂಬ ದೆಹಲಿ ಹೈಕೋರ್ಟ್ ತೀರ್ಪಿಗೆ ನಿರ್ಭಯಾ ಹೆತ್ತವರು ನೀಡಿದ ನಿರಾಶಾದಾಯಕ ಪ್ರತಿಕ್ರಿಯೆಯಿದು.
ನಮ್ಮ ಮೂರು ವರ್ಷಗಳ ಹೋರಾಟದ ಹೊರತಾಗಿಯೂ, ನಮ್ಮ ಸರ್ಕಾರ ಮತ್ತು ನ್ಯಾಯಾಲಯವು ಒಬ್ಬ ಅಪರಾಧಿಯನ್ನು ಬಿಡುಗಡೆ ಮಾಡಿತು. ನಮಗೆ ಖಂಡಿತಾ ನ್ಯಾಯ ಒದಗಿಸಲಾಗುವುದು ಎಂಬ ಆಶ್ವಾಸನೆ ನೀಡಲಾಗಿತ್ತು. ಆದರೆ, ಅದನ್ನು ಪೂರೈಸಲಿಲ್ಲ ಎಂದು ನಿರ್ಭಯಾಳ ತಾಯಿ ಆಶಾದೇವಿ ನೋವು ತೋಡಿಕೊಂಡರು.
ಕೋರ್ಟ್ ಆದೇಶ ನೀಡುವಾಗ ಸಮಾಜದ ಹಿತದೃಷ್ಟಿ ಬಗ್ಗೆಯಾದರೂ ಯೋಚಿಸಬೇಕಿತ್ತು. ಭವಿಷ್ಯದಲ್ಲಿ ಯಾರೂ ಇಂತಹ ಅಪರಾಧ ಎಸಗದಂತೆ ಕಠಿಣ ನಿಲುವು ತಾಳಬಹುದಿತ್ತು ಎಂದು ನಿರ್ಭಯಾ ತಂದೆ ಹೇಳಿದರು. ಜತೆಗೆ, ತೀರ್ಪು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರುವ ಬಗ್ಗೆ ಚಿಂತನೆ ನಡೆಸಿಲ್ಲ ಎಂದರು.