ಬೆಂಗಳೂರು: ದೆಹಲಿ ಸಾಮೂಹಿಕ ಅತ್ಯಾಚಾರ ಪ್ರಕರಣದ ಬಾಲಪರಾಧಿ ಬಂಧಮುಕ್ತನಾದ ಬಳಿಕ ಎಚ್ಚೆತ್ತುಕೊಂಡ ನಮ್ಮ ಜನಪ್ರತಿನಿಧಿಗಳು ಕಡೆಗೂ ಬಾಲಪರಾಧ ನ್ಯಾಯ ತಿದ್ದುಪಡಿ ಕಾಯ್ದೆಯನ್ನು ಮಂಗಳವಾರ ರಾಜ್ಯಸಭೆಯಲ್ಲಿ ಅಂಗೀಕರಿಸಲಾಗಿದೆ. ಇದರೊಂದಿಗೆ ಬಾಲಪರಾಧಿಗಳ ವಯೋಮಿತಿಯನ್ನು 18ರಿಂದ 16ಕ್ಕೆ ಇಳಿಸಲಾಗಿದೆ.
ಇಂದು ರಾಜ್ಯಸಭೆಯಲ್ಲಿ ಸುದೀರ್ಘ ಚರ್ಚೆ ಬಳಿಕ ತಿದ್ದುಪಡಿ ವಿಧೇಯಕವನ್ನು ಮತಕ್ಕೆ ಹಾಕಲಾಯಿತು. ಬಳಿಕ ಧ್ವನಿಮತದ ಮೂಲಕ ವಿಧೇಯಕವನ್ನು ಅಂಗೀಕರಿಸಲಾತು. ಈ ವೇಳೆ ಸಿಪಿಐಎಂ, ಜೆಡಿಯು ಹಾಗೂ ಎಐಎಡಿಎಂಕೆ ಸದಸ್ಯರು ತಿದ್ದುಪಡಿ ವಿಧೇಯಕಕ್ಕೆ ವಿರೋಧ ವ್ಯಕ್ತಪಡಿಸಿ ಸಭಾತ್ಯಾಗ ಮಾಡಿದರು. ಕಲಾಪದಲ್ಲಿ ನಿರ್ಭಯಾ ಪೋಷಕರು ಸಹ ಉಪಸ್ಥಿತರಿದ್ದರು.
ತಿದ್ದುಡಿ ವಿಧೇಯಕದಂತೆ 16 ವರ್ಷ ದಾಟಿದ ಅಪರಾಧಿಗಳನ್ನು ವಸ್ಕರಂತೆ ಪರಿಗಣಿಸಲಾಗುವುದು ಮತ್ತು 16 ವರ್ಷದೊಳಗಿನ ಬಾಲಪರಾಧಿಗಳು ಅತ್ಯಂತ ಘೋರ ಅಪರಾಧ ಮಾಡಿದರೆ ಗರಿಷ್ಠ 7 ವರ್ಷ, ಗಂಭೀರ ಅಪರಾಧಗಳಲ್ಲಿ 3ರಿಂದ 7 ವರ್ಷ ಹಾಗೂ ಸಾಮಾನ್ಯ ಅಪರಾಧಗಳಲ್ಲಿ ಗರಿಷ್ಠ ಮೂರು ವರ್ಷ ಜೈಲು ಶಿಕ್ಷೆ ವಿಧಿಸಬಹುದಾಗಿದೆ. ಆದರೆ ಬಾಲಪರಾಧಿಗಳಿಗೆ ಗಲ್ಲು ಶಿಕ್ಷೆ ಮತ್ತು ಜೀವಾವಧಿ ಶಿಕ್ಷೆ ನೀಡುವಂತಿಲ್ಲ.
ಬಾಲಾಪರಾಧಿಯ ವಯಸ್ಸನ್ನು 16 ವರ್ಷಕ್ಕೆ ಇಳಿಸುವ ಬಗ್ಗೆ ಜೆಡಿಯು, ಎಐಎಡಿಎಂಕೆ ಸದಸ್ಯರು ವಿರೋಧ ವ್ಯಕ್ತಪಡಿಸಿದ್ದರೆ, ಬಾಲನ್ಯಾಯ ಕಾಯ್ದೆ ತಿದ್ದುಪಡಿ ಮಸೂದೆಗೆ ಕಾಂಗ್ರೆಸ್, ಟಿಎಂಸಿ ಸದಸ್ಯರು ಬೆಂಬಲ ವ್ಯಕ್ತಪಡಿಸಿದವು. ಆದರೆ ಮಸೂದೆಯನ್ನು ಸೆಲೆಕ್ಟ್ ಕಮಿಟಿಗೆ ಕಳುಹಿಸುವಂತೆ ಸಿಪಿಐಎಂ ಒತ್ತಾಯಿಸಿತು.