ನವದೆಹಲಿ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನವಾದ ಇಂದು ದೇಶದಲ್ಲಿ 'ಉತ್ತಮ ಆಡಳಿತ ದಿನ' ಎಂದು ಆಚರಿಸಲಾಗುತ್ತಿದೆ. ಇದು ಎರಡನೇ ವರ್ಷದ ಆಚರಣೆ.
ದೇಶದಾದ್ಯಂತ ಈ ದಿನದ ನೆನಪಿಗೆ ಬಿಜೆಪಿ ಪಕ್ಷದಿಂದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. 'ಉತ್ತಮ ಆಡಳಿತ ದಿನ'ದ ಸಂಭ್ರಮಾಚರಣೆಗಳಾಗಿ ಕರ್ನಾಟಕ ಬಿಜೆಪಿ ರಾಜ್ಯದಾದ್ಯಂತ ಸ್ವಚ್ಛ ಭಾರತ ಅಭಿಯಾನ ಮತ್ತು ಇತರ ಚಟುವಟಿಕೆಗಳನ್ನು ಹಮ್ಮಿಕೊಂಡಿದೆ.
ಈ ಸಂದರ್ಭದಲ್ಲಿ ಭಾರತೀಯ ಜನತಾ ಪಕ್ಷದ ಸಂಸದರು ಮತ್ತು ಇತರ ಪಕ್ಷದ ಅಧಿಕಾರಿಗಳು ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ದೇಶದ ಬಡ ಜನ ಮತ್ತು ಯುವಕರಿಗಾಗಿ ಎನ್ ಡಿ ಎ ಸರ್ಕಾರ ಮಾಡಿರುವ ಉತ್ತಮ ಕೆಲಸಗಳನ್ನು ಜನಕ್ಕೆ ವಿವರಿಸಲಿದ್ದಾರೆ.
ಏತನ್ಮಧ್ಯೆ ಬಿಜೆಪಿ ಪಕ್ಷದ ಮೇಲೆ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ಮುಖಂಡ ಶಶಿ ತರೂರ್ "ಕಳೆದ ವರ್ಷದಂತೆ ಈ ವರ್ಷ 'ಉತ್ತಮ ಆಡಳಿತ ದಿನ'ಕ್ಕೆ ಹೆಚ್ಚು ಮಹತ್ವ ನೀಡಲಾಗಿಲ್ಲ. ಏಕೆಂದರೆ ಕ್ರಿಸ್ಮಸ್ ಎಲ್ಲ ಕಡೆ ಕಾಣಿಸುತ್ತಿದೆ ಆದರೆ ಉತ್ತಮ ಆಡಳಿತ ಎಲ್ಲೂ ಗೋಚರಿಸುತ್ತಿಲ್ಲ" ಎಂದು ಟ್ವೀಟ್ ಮಾಡಿದ್ದಾರೆ.
Advertisement