ಸಂಸತ್ ಭವನ ಉದ್ಘಾಟನೆ ನಂತರ ಸಭಾಂಗಣದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಆಫ್ಘಾನಿಸ್ತಾನದ ಪ್ರಜಾಪ್ರಭುತ್ವದ ಈ ನೂತನ ಭವನವನ್ನು ಸಮರ್ಪಿಸುವ ಈ ಸಂದರ್ಭ ಹಾಗೂ ಮೊಹಮ್ಮದ್ ಅಶ್ರಫ್ ಘನಿ ಮತ್ತು ಸಂಸದರೊಂದಿಗೆ ಸೇರುವ ಅವಕಾಶ ಸಿಕ್ಕಿದಕ್ಕಾಗಿ ನಾನು ಕೃತಜ್ಞನಾಗಿರುತ್ತೇನೆ ಎಂದು ಹೇಳಿದರು.
ಭಾಷಣ ಆರಂಭದಲ್ಲೇ ಕವಿ ರೂಮಿಯವರ "ನಿಮ್ಮ ಮಾತುಗಳ ಗುಣಮಟ್ಟ ಹೆಚ್ಚಿಸಿ, ಆದರೆ ಅದರ ಶಬ್ದವನ್ನಲ್ಲ. ಮಳೆಯು ಹೂಗಳನ್ನು ನೀಡುತ್ತದೆಯೇ ಹೊರತು ಸಿಡಿಲುಗಳಲ್ಲ ಎಂದು ಸಾಲುಗಳನ್ನೇಳುವ ಮೂಲಕ ಮೋದಿ ಮಾತುಗಳನ್ನಾರಂಭಿಸಿದರು.
ಮಾಜಿ ಪ್ರಧಾನಿ ವಾಜಪೇಯಿಯವರ ಜನ್ಮದಿನವಾದ ಇಂದು ಸಂಸತ್ ಭವನವನ್ನು ಉದ್ಘಾಟಿಸಲು ನನಗೆ ಅವಕಾಶ ಸಿಕ್ಕಿತು. ಈ ದಿನಕ್ಕಿಂತ ಉತ್ತಮವಾದ ದಿನ ಬೇರೊಂದು ಇಲ್ಲ ಎಂದು ಮೋದಿ ಹರ್ಷ ವ್ಯಕ್ತಪಡಿಸಿದರು.
ನಮ್ಮ ಉಭಯ ದೇಶಗಳ ಭಾವನಾತ್ಮಕವಾಗಿ, ಮೌಲ್ಯಯುತವಾಗಿ ಮತ್ತು ಸ್ಫೂರ್ತಿಯ ಸೆಲೆಯ ಸಂಕೇತವಾಗಿ ಈ ಕಟ್ಟಡ ಉಳಿಯುತ್ತದೆ ಎಂದ ಅವರು, ನಿಮ್ಮ ದೇಶದ ಅಭಿವೃದ್ಧಿಗಾಗಿ ನಾನು ನಿಮ್ಮೊಂದಿಗಿರುತ್ತೇವೆ ಎಂದು ಭರವಸೆ ನೀಡಿದರು.
ಅಲ್ಲದೇ, ಸಂಸತ್ ಭವನದ ಒಂದು ವಿಭಾಗಕ್ಕೆ 'ಅಟಲ್ ಬ್ಲಾಕ್' ಎಂದು ಅಟಲ್ ಬಿಹಾರಿ ವಾಜಪೇಯಿ ಅವರು ಹೆಸರು ನಾಮಕರಣ ಮಾಡಿರುವುದು ಮತ್ತಷ್ಟು ಖುಷಿ ತಂದಿದೆ. ಎರಡು ರಾಷ್ಟ್ರಗಳ ಪ್ರತಿಯೊಬ್ಬ ಪ್ರಜೆಯ ಹೃದಯದಲ್ಲಿ ಪರಸ್ಪರ ಸೀಮಾತೀತ ಪ್ರೀತಿಯಿದೆ ಎಂದು ಅವರು ಅಭಿಪ್ರಾಯಪಟ್ಟರು.
ಇಷ್ಟೇ ಅಲ್ಲದೇ, ಆಫ್ಘಾನಿಸ್ತಾನದ ಭದ್ರತಾ ಪಡೆಗಳ ಹುತ್ತಾತ್ಮರ ಮಕ್ಕಳಲ್ಲಿ 500 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನದ ಕೊಡುಗೆಯನ್ನು ಮೋದಿ ಘೋಷಿಸಿದರು.