ಪಾಕಿಸ್ತಾನಕ್ಕೆ ಮೋದಿ ದಿಢೀರ್ ಭೇಟಿ; ಈ ಭೇಟಿ ಹಿಂದಿರುವ ಉದ್ದೇಶವೇನು?

ಮೋದಿ ಪಾಕ್‌ಗೆ ದಿಢೀರ್ ಭೇಟಿ ಕೊಟ್ಟ ಉದ್ದೇಶವಾದರೂ ಏನು? ಎಂಬುದು ಸದ್ಯದ ಕುತೂಹಲ. ಈ ಕುತೂಹಲದಿಂದಲೇ ಕೆಲವೊಂದು ವಿಷಯಗಳನ್ನು ಕೂಲಂಕಷವಾಗಿ...
ಪಾಕ್ ಪ್ರಧಾನಿ ನವಾಜ್  ಶರೀಫ್ ಜತೆ ನರೇಂದ್ರ ಮೋದಿ (ಕೃಪೆ :ಪಿಟಿಐ)
ಪಾಕ್ ಪ್ರಧಾನಿ ನವಾಜ್ ಶರೀಫ್ ಜತೆ ನರೇಂದ್ರ ಮೋದಿ (ಕೃಪೆ :ಪಿಟಿಐ)
ನವದೆಹಲಿ:  ಅಫ್ಘಾನಿಸ್ತಾನಕ್ಕೆ ಭೇಟಿ ನೀಡಿದ ನಂತರ ಪ್ರಧಾನಿ ಮೋದಿ ದೆಹಲಿಗೆ ಮರಳಬೇಕಾಗಿತ್ತು. ಆದರೆ ತಾನು ಅಲ್ಲಿಂದಲೇ ಲಾಹೋರ್‌ಗೆ ಹೋಗಿ ಪಾಕಿಸ್ತಾನದ ಪ್ರಧಾನಿ ನವಾಜ್ ಶರೀಫ್ ಅವರನ್ನು ಭೇಟಿ ಮಾಡುತ್ತೇನೆ ಎಂದು ಮೋದಿ ಟ್ವೀಟ್ ಮಾಡಿಬಿಟ್ಟರು. ಅರೇ, ಇದ್ಯಾಕೆ ಮೋದಿ ದಿಢೀರ್ ಅಂತ ನಮ್ಮ ಪ್ಲಾನ್ ಚೇಂಜ್ ಮಾಡಿ ಬಿಟ್ಟರು? ಎಂದು ಎಲ್ಲರಿಗೂ ಅಚ್ಚರಿ. ವಿಪಕ್ಷದವರು ಮೋದಿಯ ಈ ನಡೆಯನ್ನು ಖಂಡಿಸಿ ಪ್ರತಿಭಟನೆ ನಡೆಸಿದರು. ಇದ್ಯಾವುದೂ ಮೋದಿಯವ ಪ್ಲಾನ್‌ನ್ನು ಬಾಧಿಸಲೇ ಇಲ್ಲ, ಬಾಧಿಸುವುದೂ ಇಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿಯೇ.
ಅಂದ ಹಾಗೆ ಮೋದಿ ಪಾಕ್‌ಗೆ ದಿಢೀರ್ ಭೇಟಿ ಕೊಟ್ಟ ಉದ್ದೇಶವಾದರೂ ಏನು? ಎಂಬುದು ಸದ್ಯದ ಕುತೂಹಲ. ಈ ಕುತೂಹಲದಿಂದಲೇ ಕೆಲವೊಂದು ವಿಷಯಗಳನ್ನು ಕೂಲಂಕಷವಾಗಿ ಗಮನಿಸುತ್ತಾ ಹೋದರೆ ಮೋದಿಯವರ ಭೇಟಿಯ ಉದ್ದೇಶ ಸ್ಪಷ್ಟವಾಗುತ್ತಾ ಹೋಗುತ್ತದೆ.
1.  ವಾರಗಳ ಹಿಂದೆಯಷ್ಟೇ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಇಸ್ಲಾಮಬಾದ್‌ಗೆ ಭೇಟಿ ನೀಡಿ ಹಾರ್ಟ್ ಆಫ್ ಏಷ್ಯಾ ಸಭೆಯಲ್ಲಿ ಭಾಗಿಯಾಗಿದ್ದರು. ಈ ಭೇಟಿಯಿಂದಾಗಿ ಪಾಕಿಸ್ತಾನದೊಂದಿಗೆ ಭಾರತದ ಮಾತುಕತೆಯ ಬಗ್ಗೆ ಇಲ್ಲಿ ಭರವಸೆ ಮೂಡಿತ್ತು.
2. ಪಾಕಿಸ್ತಾನ ಭಯೋತ್ಪಾದನಾ ಕೃತ್ಯಗಳನ್ನು ಮಾಡುತ್ತಿರುವ ಕಾರಣ, ಆ ದೇಶದೊಂದಿಗೆ ಯಾವುದೇ ರೀತಿಯ ಮಾತುಕತೆ ಬೇಡ ಎಂಬುದು ಕಾಂಗ್ರೆಸ್‌ನ ನಿಲುವು ಆಗಿತ್ತು.  ಆದರೆ ಮೋದಿ ಅಧಿಕಾರಕ್ಕೇರಿದ ನಂತರ ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸಬೇಕೆಂಬ ಒಲವು ಕೇಂದ್ರ ಸರ್ಕಾರಕ್ಕಿತ್ತು. ಆದ್ದರಿಂದಲೇ ಉಭಯ ರಾಷ್ಟ್ರಗಳ ರಾಷ್ಟ್ರೀಯ ಭದ್ರತಾ ಸಲಹೆಗಾರರು ಬ್ಯಾಂಕಾಕ್‌ನಲ್ಲಿ ಭೇಟಿ ಮಾಡಿ ಕಾಶ್ಮೀರ ಸಮಸ್ಯೆ ಮತ್ತು ಮುಂದಿನ ಮಾತುಕತೆಗಳ ಬಗ್ಗೆ ಚರ್ಚೆ ನಡೆಸಿದ್ದರು.
3. ರಷ್ಯಾದ ಉಫಾದಲ್ಲಿ ನಡೆದ ಎಸ್‌ಸಿಒ ಶೃಂಗಸಭೆ (ಶಾಂಘೈ ಕಾರ್ಪರೇಷನ್ ಆರ್ಗನೈಸೇಷನ್ ) ಮತ್ತು ಪ್ಯಾರಿಸ್ ನಲ್ಲಿ ನಡೆದ ಹವಾಮಾನ ಶೃಂಗಸಭೆಯಲ್ಲಿಯೂ ಮೋದಿ ಮತ್ತು ಶರೀಫ್ ನಡುವಿನ ಭೇಟಿ ನಡೆದಿದೆ.
4. ಅಫ್ಘಾನಿಸ್ತಾನಕ್ಕೆ ಭೇಟಿ ನೀಡಿದ ಮೋದಿಯವರಿಗೆ ಪಾಕಿಸ್ತಾನದ ಮೂಲಕವೇ ಅಫ್ಘಾನಿಸ್ತಾನವನ್ನು ತಮ್ಮತ್ತ ಸೆಳೆಯಲು ಸಾಧ್ಯ ಎಂಬುದು ಮನವರಿಕೆಯಾಗಿದೆ. ಅಂದರೆ ಅಫ್ಘಾನಿಸ್ತಾನ್ ಪಾಕಿಸ್ತಾನ್ ಟ್ರೇಡ್ ಆ್ಯಂಡ್ ಟ್ರಾನ್ಸಿಟ್ ಒಪ್ಪಂದಕ್ಕೆ ಇಸ್ಲಾಮಾಬಾದ್‌ನ ಒಪ್ಪಿಗೆ ಬೇಕು ಎಂಬ  ವಿಷಯ ಗೊತ್ತಾಗಿದೆ. ಈ ಕಾರಣದಿಂದಲೇ ಮೋದಿ ಪಾಕ್‌ಗೆ ಭೇಟಿ  ನೀಡಿದ್ದಾರೆ.
5. ಕೊನೆಯದಾಗಿ, ಮೋದಿ ಒಬ್ಬ ಚತುರ ರಾಜಕಾರಣಿ. ಈ ಹಿಂದೆ ಭಾರತದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಪಾಕಿಸ್ತಾನದ ಬಗ್ಗೆ ಮಾತನಾಡುವಾಗ, ಸ್ನೇಹಿತರನ್ನು ಬದಲಿಸಬಹುದು ಆದರೆ ನೆರೆಹೊರೆಯವರನ್ನಲ್ಲ ಎಂಬ ಮಾತನ್ನು ಹೇಳಿದ್ದರು. ಮೋದಿ ಈಗ ಅಕ್ಷರಶಃ ಅದೇ ಮಾತನ್ನು ಪಾಲಿಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com