ಅಂಬಿ ವಿರುದ್ಧ ಕೇಸ್ ದಾಖಲಿಸಲು ಸ್ಪೀಕರ್ ಗ್ರೀನ್ ಸಿಗ್ನಲ್

ಹಿರಿಯ ನಟ ಹಾಗೂ ವಸತಿ ಸಚಿವ ಅಂಬರೀಶ್ ವಿರುದ್ಧ ಕೇಸ್ ದಾಖಲಿಸಲು ತಮ್ಮ ಅನುಮತಿ ಬೇಕಿಲ್ಲ ಎಂದು ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರು ಸೋಮವಾರ ಸ್ಪಷ್ಟಪಡಿಸಿದ್ದಾರೆ.
ಅಂಬರೀಶ್
ಅಂಬರೀಶ್

ಬೆಂಗಳೂರು: ಹಿರಿಯ ನಟ ಹಾಗೂ ವಸತಿ ಸಚಿವ ಅಂಬರೀಶ್ ವಿರುದ್ಧ ಕೇಸ್ ದಾಖಲಿಸಲು ತಮ್ಮ ಅನುಮತಿ ಬೇಕಿಲ್ಲ ಎಂದು ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರು ಸೋಮವಾರ ಸ್ಪಷ್ಟಪಡಿಸಿದ್ದಾರೆ.

ತಮ್ಮ ಚಿಕಿತ್ಸೆಗೆ ಸರ್ಕಾರದಿಂದ 1.16 ಕೋಟಿ ರುಪಾಯಿ ವೈದ್ಯಕೀಯ ವೆಚ್ಚ ಪಡೆದ ಅಂಬರೀಶ್ ವಿರುದ್ಧ ಕೇಸ್ ದಾಖಲಿಸಲು ಅನುಮತಿ ಕೋರಿ ಶಿವಮೊಗ್ಗದ ವಕೀಲ ವಿನೋದ್ ಅವರು ಅರ್ಜಿ ಸಲ್ಲಿಸಿದ್ದರು.

ವಿನೋದ್ ಅವರ ಅರ್ಜಿಯನ್ನು ಪರಿಶೀಲಿಸಿದ ಸ್ಪೀಕರ್, ಅಂಬರೀಶ್ ವಿರುದ್ಧ ದೂರು ದಾಖಲಿಸಲು ಯಾವುದೆ ಅಡ್ಡಿ ಇಲ್ಲ ಮತ್ತು ಅವರ ವಿರುದ್ಧ ಪ್ರಕರಣ ದಾಖಲಿಸಲು ತಮ್ಮ ಅನುಮತಿಯ ಅಗತ್ಯವೂ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ವಕೀಲ ವಿನೋದ್ ಅವರು ಡಿಸೆಂಬರ್ 19ರಂದು ಅಂಬರೀಶ್‌ ವಿರುದ್ಧ ದೂರು ದಾಖಲಿಸಲು ಅನುಮತಿ ನೀಡುವಂತೆ ಸ್ಪೀಕರ್, ರಾಜ್ಯಪಾಲರು ಮತ್ತು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದರು. ಸೋಮವಾರ ಸ್ಪೀಕರ್ ಕಚೇರಿಯಿಂದ ದೂರು ಕೊಡಲು ಅನುಮತಿ ಬೇಕಿಲ್ಲ ಎಂದು ವಿನೋದ್ ಅವರಿಗೆ ಉತ್ತರ ನೀಡಲಾಗಿದೆ.

ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದ ಅಂಬರೀಶ್ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಬಳಿಕ ಅವರನ್ನು ಸಿಂಗಾಪುರದ ಮೌಂಟ್ ಎಲಿಜಬೆತ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಂಬರೀಶ್ ಅವರ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ರಾಜ್ಯ ಸರ್ಕಾರ ಪಾವತಿ ಮಾಡಿತ್ತು.

ಕರ್ನಾಟಕ ಸಚಿವರ ವೈದ್ಯಕೀಯ ವೆಚ್ಚ ನಿಯಮ 1958ರ ಪ್ರಕಾರ ದೇಶದ ಯಾವುದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಸಚಿವರಿಗೆ ಗರಿಷ್ಠ 5 ಲಕ್ಷ ರುಪಾಯಿ ಮಾತ್ರ ಪಾವತಿ ಮಾಡಬಹುದು. ಇನ್ನು ವಿದೇಶದಲ್ಲಿ ಚಿಕಿತ್ಸೆ ಪಡೆದರೆ ಸಚಿವರ ಆರ್ಥಿಕ ಸ್ಥಿತಿಗತಿ ನೋಡಿಕೊಂಡು ಸಂಪುಟದ ಅನುಮೋದನೆ ಪಡೆದು ಹಣ ಬಿಡುಗಡೆ ಮಾಡಬೇಕು. ಆದರೆ ಅಂಬರೀಶ್ ಅವರು ಆರ್ಥಿಕವಾಗಿ ಸದೃಢವಾಗಿದ್ದರೂ ಸರ್ಕಾರ ಹಣ ಬಿಡುಗಡೆ ಮಾಡಿರುವುದು ಜನರ ಹಣದ ದುರುಪಯೋಗವಾಗಿದೆ. ಆದ್ದರಿಂದ, ಅವರ ವಿರುದ್ಧ ಲೋಕಾಯುಕ್ತದಲ್ಲಿ ದೂರು ಸಲ್ಲಿಸಲು ಅವಕಾಶ ನೀಡಬೇಕೆಂದು ವಿನೋದ್ ಮನವಿ ಮಾಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com