
ತ್ರಿಶೂರ್: ಕೇರಳದ ತೃಶೂರ್ ಜಿಲ್ಲೆಯ ಇರಿಞಾಲಿಕ್ಕುಡದಲ್ಲಿ 5,211 ಕಲಾವಿದರು ಪ್ರದರ್ಶಿಸಿದ ತಿರುವಾದಿರಕ್ಕಳಿ ನೃತ್ಯ ಈಗ ಗಿನ್ನಿಸ್ ದಾಖಲೆಯಲ್ಲಿ ಸ್ಥಾನ ಗಿಟ್ಟಿಸಿಕೊಂಡಿದೆ.
ಇರಿಞಾಲಿಕ್ಕುಡದಲ್ಲಿ ಫೆ.2ರಂದು ನಡೆದ ಸಾಂಸ್ಕೃತಿಕ ಕಾರ್ಯಕ್ರಮ 'ತನಿಮಾ'ದಲ್ಲಿ ಕೇರಳದ ಸಾಂಸ್ಕೃತಿಕ ನೃತ್ಯವಾದ ತಿರುವಾದಿರಕ್ಕಳಿ ಪ್ರದರ್ಶನಗೊಂಡಿತ್ತು. ಕೇರಳದ ಮಲಯಾಳಿ ಸೀರೆ ಹಾಗು ಹಸಿರು ಬಣ್ಣದ ರವಿಕೆ ತೊಟ್ಟ 5, 211 ಮಹಿಳೆಯರು ಈ ನೃತ್ಯದಲ್ಲಿ ಭಾಗವಹಿಸಿದ್ದರು.
ಜೀತಾ ಬಿನೋಯ್ ಕುಂಜಿಲಿಕ್ಕಾಡು ಈ ನೃತ್ಯಕ್ಕೆ ನೇತೃತ್ವವಹಿಸಿದ್ದರು. ಕಲಾವಿದರನ್ನು ಹಲವಾರು ತಂಡಗಳನ್ನಾಗಿ ವಿಭಜಿಸಿ ನೃತ್ಯ ಅಭ್ಯಾಸ ಮಾಡಿಸಲಾಗಿತ್ತು. ಈ ತಂಡದಲ್ಲಿ 5 ವರ್ಷದಿಂದ 90 ವರ್ಷದವರೆಗಿನ ಕಲಾವಿದರು ಭಾಗವಹಿಸಿದ್ದರು ಎಂಬುದು ಇನ್ನೊಂದು ವಿಶೇಷ.
ಮಲಯಾಳಂ ತಿಂಗಳು ಧನು ಮಾಸ (ಡಿಸೆಂಬರ್-ಜನವರಿ)ದ ತಿರುವಾದಿರ ದಿನದಂದು ಈ ನೃತ್ಯವನ್ನಾಡುವುದು ಕೇರಳದ ಸಂಸ್ಕೃತಿಯಾಗಿದೆ. ಶಿವಪಾರ್ವತಿಯರನ್ನು ಸ್ತುತಿಸುತ್ತಾ ತಿರುವಾದಿರಪಾಟ್ಟುಗೆ ಹೆಂಗೆಳೆಯರು ನೃತ್ಯ ಮಾಡುವುದು ಪದ್ಧತಿ.
ಇರಿಞಾಲಿಕ್ಕುಡದಲ್ಲಿ ನಡೆದ ಈ ಮೆಗಾ ತಿರುವಾದಿರಕ್ಕಳಿಯಲ್ಲಿ ಕಲಾವಿದರು ತಿರುವಾದಿರಪಾಟ್ಟು, ಕಥಕ್ಕಳಿ ಪಾಡಂ, ಕುಮ್ಮಿ, ಕುರತ್ತಿಪ್ಪಾಟು ಮತ್ತು ವಂಜಿಪ್ಪಾಟ್ಟಿಗೆ ಹೆಜ್ಜೆ ಹಾಕಿದ್ದರು.
Advertisement