ಆಂತರಿಕ ಸಮೀಕ್ಷೆ: ತಮ್ಮ ಗೆಲುವನ್ನು ಬಿಂಬಿಸಿಕೊಂಡ ಬಿಜೆಪಿ ಮತ್ತು ಎಎಪಿ

ದೆಹಲಿಯ ವಿಧಾನಸಭಾ ಚುನಾವಣೆಗಳ ಬಹಿರಂಗ ಪ್ರಚಾರಕ್ಕೆ ತೆರೆ ಬೀಳಲು ಇನ್ನೊಂದೇ ದಿನ ಉಳಿದಿದ್ದು ಆಮ್ ಆದ್ಮಿ ಪಕ್ಷ ಮತ್ತು ಬಿಜೆಪಿ ಪಕ್ಷಗಳು
ಕಿರಣ್ ಬೇಡಿ-ಅರವಿಂದ್ ಕೇಜ್ರಿವಾಲ್ (ಸಂಗ್ರಹ ಚಿತ್ರ)
ಕಿರಣ್ ಬೇಡಿ-ಅರವಿಂದ್ ಕೇಜ್ರಿವಾಲ್ (ಸಂಗ್ರಹ ಚಿತ್ರ)

ನವದೆಹಲಿ: ದೆಹಲಿಯ ವಿಧಾನಸಭಾ ಚುನಾವಣೆಗಳ ಬಹಿರಂಗ ಪ್ರಚಾರಕ್ಕೆ ತೆರೆ ಬೀಳಲು ಇನ್ನೊಂದೇ ದಿನ ಉಳಿದಿದ್ದು ಆಮ್ ಆದ್ಮಿ ಪಕ್ಷ ಮತ್ತು ಬಿಜೆಪಿ ಪಕ್ಷಗಳು ತಮ್ಮ ಆಂತರಿಕ ಚುನಾವಣಾ ಸರ್ವೆಯಲ್ಲಿ ತಮ್ಮದೇ ಪಕ್ಷದ ಗೆಲುವನ್ನು ಬಿಂಬಿಸಿಕೊಂಡಿವೆ. ಎಎಪಿ ೫೧ ಸ್ಥಾನಗಳನ್ನು ಜಯಭೇರಿ ಬಾರಿಸುವುದಾಗಿ ಹೇಳಿಕೊಂಡಿದ್ದರೆ, ಬಿಜೆಪಿ ಪಕ್ಷದ ಸರ್ವೆ ತಮ್ಮ ಪಕ್ಷ ೪೩ ಸ್ಥಾನಗಳನ್ನು ಗೆಲ್ಲುವುದಾಗಿ ಬಿಂಬಿಸಿಕೊಂಡಿದೆ.

ಫೆಬ್ರವರಿ ೭ರ ಮತದಾನ ದಿನ ಹತ್ತಿರವಾಗುತ್ತಿದ್ದಂತೆ, ಬಹುತೇಕ ಮಾಧ್ಯಮದ ಸಮೀಕ್ಷೆಗಳು ಎಎಪಿ ಪಕ್ಷ ಬಹುಮತ ಗಳಿಸಿ ದೆಹಲಿ ಆಡಳಿತದ ಚುಕ್ಕಾಣಿ ಹಿಡಿಯಲಿದೆ ಎಂದು ಹೇಳುತ್ತಿವೆ. ತನ್ನ ಆಂತರಿಕ ಸಮೀಕ್ಷೆಯ ಪ್ರಕಾರ ಎಎಪಿ ಪಕ್ಷ ದೊಡ್ಡ ಮಟ್ಟದಲ್ಲಿ ಜಯಭೇರಿ ಬಾರಿಸುವುದಾಗಿ ಬುಧವಾರ ಸಾರ್ವಜನಿಕವಾಗಿ ಹೇಳಿಕೊಂಡಿದೆ. "ಎಎಪಿ ಪಕ್ಷ ೫೧ ಸ್ಥಾನಗಳು, ಬಿಜೆಪಿ ೧೫ ಹಾಗೂ ಕಾಂಗ್ರೆಸ್ ಮತ್ತು ಇತರ ಪಕ್ಷಗಳು ೪ ಸ್ಥಾನಗಳನ್ನು ಗಳಿಸಲಿವೆ" ಎಂದು ಪಕ್ಷದ ಹಿರಿಯ ನಾಯಕ ಯೋಗೇಂದ್ರ ಯಾದವ್ ತಿಳಿಸಿದ್ದಾರೆ.  ಈ ಮಧ್ಯೆ ಬಿಜೆಪಿ ಪಕ್ಷ ತನ್ನ ಆಂತರಿಕ ಸಮೀಕ್ಷೆಯನ್ನು ವೃತ್ತಿಪರ ಸಂಸ್ಥೆಯೊಂದು ನಡೆಸಿದ್ದು, ಪಕ್ಷ ೪೩ ಸ್ಥಾನಗಳನ್ನು ಗೆಲ್ಲಲಿದೆ ಎಂದು ಬಿಂಬಿಸಿದೆ.

ಎಎಪಿ ಪಕ್ಷಕ್ಕೆ ೪೬% ಮತಗಳು ಒಲಿಯಲಿದ್ದು, ಬಿಜೆಪಿ ೩೩% ಮತಗಳನ್ನು, ಕಾಂಗ್ರೆಸ್ ೧೧% ಮತಗಳನ್ನು ಹಾಗೂ ಇತರ ಪಕ್ಷಗಳು ೧೦% ಮತ ಪಡೆಯುವ ಸಾಧ್ಯತೆಯಿದೆ ಎಂದು ಯೋಗೇಂದ್ರ ಯಾದವ್ ತಿಳಿಸಿದ್ದಾರೆ.

ಈಶಾನ್ಯ ರಾಜ್ಯಗಳಲ್ಲಿ ಬಿಜೆಪಿ ವಿರುದ್ಧ ಬೃಹತ್ ಪ್ರತಿಭಟನೆ

ದೆಹಲಿ ಚುನಾವಣೆಗೆ ಬಿಜೆಪಿ ಬಿಡುಗಡೆ ಮಾಡಿದ ಪ್ರಣಾಳಿಕೆಯಲ್ಲಿ ಈಶಾನ್ಯ ರಾಜ್ಯಗಳ ಪ್ರಜೆಗಳನ್ನು ವಲಸಿಗರು ಎಂದು ಕರೆದಿರುವುದಕ್ಕೆ ಅಸ್ಸಾಂನಲ್ಲಿ ಬುಧವಾರ ಬಿಜೆಪಿ ಪಕ್ಷದ ವಿರುದ್ಧ ಬೃಹತ್ ಪ್ರತಿಭಟನೆ ನಡೆದಿದೆ. ಆಳುತ್ತಿರುವ ಕಾಂಗ್ರೆಸ್ ಪಕ್ಷ, ಎಜಿಪಿ ಮುಂತಾದ ಸಂಘಟನೆಗಳು ಪಾಲ್ಗೊಂಡ ಈ ಪ್ರತಿಭಟನೆಯಲ್ಲಿ ಪ್ರಧಾನಮಂತ್ರಿ ನರೇಂದ್ರಮೋದಿಯವರ ಪ್ರತಿಕೃತಿಯನ್ನು ಸುಟ್ಟಿದ್ದಲ್ಲದೆ ಬಿಜೆಪಿ ಪಕ್ಷದಿಂದ ಬೇಷರತ್ ಕ್ಷಮೆ ಯಾಚಿಸಿವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com