
ಬೆಂಗಳೂರು: ರಾಜ್ಯದಲ್ಲಿ ಮತ್ತೆ ಲಾಟರಿ ಆರಂಭಿಸುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ವಿಧಾನ ಪರಿಷತ್‌ನಲ್ಲಿ ಸ್ಪಷ್ಟಪಡಿಸಿದ್ದಾರೆ.
ಇಂದು ಜೆಡಿಎಸ್ ಸದಸ್ಯ ಬಸವರಾಜ್ ಹೊರಟ್ಟಿ ಅವರ ಪ್ರಶ್ನೆಗೆ ಉತ್ತರಿಸಿದ ಸಿಎಂ, ಸರ್ಕಾರದ ಬಳಿ ಸಾಕಷ್ಟು ಹಣವಿದೆ. ಲಾಟರಿ ಮೂಲಕ ಹಣ ಮಾಡುವ ಅಗತ್ಯವಿಲ್ಲ ಎಂದರು. ಅಲ್ಲದೆ ಲಾಟರಿಯನ್ನು ಪುನಾ ಆರಂಭಿಸುವ ಪ್ರಶ್ನೆಯೇ ಇಲ್ಲ ಮತ್ತು ಅಂತಹ ಯಾವುದೇ ಉದ್ದೇಶ ಸರ್ಕಾರದ ಮುಂದಿಲ್ಲ ಎಂದು ಸ್ಪಷ್ಟನೆ ನೀಡಿದರು.
ರಾಜ್ಯದಲ್ಲಿ ಕಳೆದ 7 ವರ್ಷಗಳಿಂದ ನಿಷೇಧಿಸಲಾಗಿರುವ ಲಾಟರಿ ಹಾವಳಿ ಮತ್ತೆ ನುಸುಳುವುದಕ್ಕೆ ಅವಕಾಶವಾಗುವಂಥ ಪ್ರಸ್ತಾಪವನ್ನು ರಾಜ್ಯ ಯೋಜನಾ ಮಂಡಳಿಯೇ ಸರ್ಕಾರದ ಮುಂದೆ ಇಟ್ಟಿತ್ತು. ಆದರೆ ನಿನ್ನೆ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು.
ಕೇರಳ ರಾಜ್ಯದಲ್ಲಿ ಜಾರಿಯಲ್ಲಿರುವ ಕಾರುಣ್ಯ ಬೆನೋವಲೆಂಟ್ ಅಂಡ್ ಮಾದರಿಯಲ್ಲಿ ರಾಜ್ಯದಲ್ಲಿ `ಅಣ್ಣಾ ಕಾರುಣ್ಯ ಆರೋಗ್ಯಯೋಜನೆ ' ಎಂಬಹೊಸ ಲಾಟರಿ ವ್ಯವಸ್ಥೆಯನ್ನು ರಾಜ್ಯ ಸರ್ಕಾರ ಜಾರಿಗೆ ತರಬೇಕೆಂಬ ಮಹಾನ್ `ಕಲ್ಯಾಣ' ಸಲಹೆಯನ್ನು ಯೋಜನಾ ಮಂಡಳಿ ಉಪಾಧ್ಯಕ್ಷ ಸಿ.ಎಂ.ಇಬ್ರಾಹಿಂ ಸರ್ಕಾರದ ಮುಂದೆ ಇಟ್ಟಿದ್ದರು.
ದೀರ್ಘಕಾಲಿಕ ರೋಗಗಳಿಂದ ಬಳಲುತ್ತಿರುವ ಬಡ ಮತ್ತು ಮಧ್ಯಮ ವರ್ಗದ ರೋಗಿಗಳ ಅನುಕೂಲಕ್ಕಾಗಿ ಈ ಯೋಜನೆ ಜಾರಿಗೆ ತರಬೇಕು. ಇದಕ್ಕೆ ಸುಮಾರು 500ರಿಂದ 600 ಕೋಟಿ ವಾರ್ಷಿಕ ಖರ್ಚು ಬೇಕಾಗುವುದರಿಂದ ಯೋಜನೆಗೆ ಅಗತ್ಯವಾದ ಹಣವನ್ನು ಲಾಟರಿ ಮೂಲಕ ಎತ್ತಬೇಕೆಂಬ ಪ್ರಸ್ತಾಪವನ್ನು ಇಬ್ರಾಹಿಂ ಸರ್ಕಾರದ ಮುಂದಿಟ್ಟಿದ್ದರು.
Advertisement