
ಬೆಂಗಳೂರು: ವಿಶ್ವ ಹಿಂದು ಪರಿಷತ್ತಿನ ಅಂತಾರಾಷ್ಟ್ರೀಯ ಕಾರ್ಯಾಧ್ಯಕ್ಷ ಪ್ರವೀಣ್‌ಭಾಯಿ ತೊಗಾಡಿಯಾ ಅವರಿಗೆ ಬೆಂಗಳೂರು ನಗರ ಪ್ರವೇಶ ನಿಷೇಧಿಸಿರುವ ಹಿನ್ನೆಲೆಯಲ್ಲಿ ಭಾನುವಾರದ "ವಿರಾಟ ಹಿಂದು ಸಮಾಜೋತ್ಸವ'ದಲ್ಲಿ ಅವರ ವೀಡಿಯೋ ಕಾನ್ಫರೆನ್ಸ್ ಭಾಷಣದ ನೇರ ಪ್ರಸಾರದ ವ್ಯವಸ್ಥೆ ಮಾಡುವ ಚಿಂತನೆ ನಡೆದಿದೆ.
ನಗರದ ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ನಡೆಯುವ ವಿರಾಟ ಹಿಂದು ಸಮಾಜೋತ್ಸವ ಪ್ರವೀಣ್ ತೊಗಾಡಿಯಾ ಮುಖ್ಯ ಮತ್ತು ಆಕರ್ಷಕ ಭಾಷಣಕಾರರಾಗಿದ್ದರಿಂದ ಪರೋಕ್ಷವಾಗಿಯಾದರೂ ಅವರ ಮಾತುಗಳನ್ನು ಜನರಿಗೆ ತಲುಪಿಸುವ ಬಗ್ಗೆ ವಿಶ್ವ ಹಿಂದು ಪರಿಷತ್ತಿನ ರಾಜ್ಯ ಘಟಕ ಪರಿಶೀಲನೆ ನಡೆಸಿದೆ.
ಆದರೆ, ವಿಶ್ವ ಹಿಂದು ಪರಿಷತ್ತಿನ ಈ ಆಲೋಚನೆಗೆ ರಾಜ್ಯ ಸರ್ಕಾರ ಅಥವಾ ಬೆಂಗಳೂರು ಪೊಲೀಸರು ಯಾವ ಕ್ರಮ ಅನುಸರಿಸುತ್ತಾರೆ? ಎಂಬುದು ಸದ್ಯದ ಪ್ರಶ್ನೆ. ಅದಾಗ್ಯೂ ತೊಗಾಡಿಯಾ ಪ್ರವೇಶ ನಿರ್ಬಂಧಕ್ಕೆ ಅಸ್ತು ಎಂದಿರುವಾಗ ಇದು ಹೈಕೋರ್ಟ್ ಆದೇಶದ ಉಲ್ಲಂಘನೆಯಾಗುವ ಸಾಧ್ಯತೆ ಇದೆ.
ಶನಿವಾರ ತೊಗಾಡಿಯಾ ಅವರು ಬೆಂಗಳೂರು ನಗರಕ್ಕೆ ಸಮೀಪದಲ್ಲಿನ ತಮಿಳುನಾಡು ಗಡಿ ಭಾಗದಲ್ಲಿರುವ ಹೊಸೂರಿಗೆ ಆಗಮಿಸುವ ಸಾಧ್ಯತೆಯಿದ್ದು, ಈ ವೇಳೆ ಅವರೊಂದಿಗೆ ಸಮಾಲೋಚನೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
ತೊಗಾಡಿಯಾ ಅವರು ಅನುಮತಿ ನೀಡಿದರೆ ಅವರು ಭಾನುವಾರ ಮಾಡಬೇಕಾಗಿದ್ದ ಭಾಷಣ ದೃಶ್ಯವನ್ನು ಶನಿವಾರವೇ ಚಿತ್ರೀಕರಿಸಿಕೊಳಳ್ಳಲಾಗುತ್ತದೆ. "ಅದು ಬೇಡ. ಬೇರೊಂದು ಪ್ರದೇಶದಿಂದ ನಾನು ಸಮಾಜೋತ್ಸವದ ಸಮಯದಲ್ಲಿಯೇ ಮಾತನಾಡುವುದನ್ನು ನೇರ ಪ್ರಸಾರ ಮಾಡಬಹುದು' ಎಂದರೆ ಅದಕ್ಕೆ ಪರಿಷತ್ ವ್ಯವಸ್ಥೆ ಕಲ್ಪಿಸಲಿದೆ.
ಒಟ್ಟಿನಲ್ಲಿ ತೊಗಾಡಿಯಾ ಭಾಷಣವನ್ನು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಭಾನುವಾರ ಸಂಜೆ ಸಮಾಜೋತ್ಸವದಲ್ಲಿ ಪಾಲ್ಗೊಳ್ಳುವ ಸಹಸ್ರಾರು ಜನರಿಗೆ ತಲುಪಿ ವಿಶ್ವ ಹಿಂದು ಪರಿಷತ್ ಶತಾಯಗತಾಯಾ ಪ್ರಯತ್ನವನ್ನು ನಡೆಸುತ್ತಿದೆ.
Advertisement