

ನವದೆಹಲಿ: ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಹೀನಾಯ ಸೋಲು ಅನುಭವಿಸಿರುವ ಬಿಜೆಪಿ, ಎಲ್ಲ ಹಂತದಲ್ಲೂ ಎಡವಿದೆ. ಸಿದ್ಧತೆ ನಡೆಸದೇ ಯುದ್ಧಕ್ಕೆ ಇಳಿದಿದ್ದು, ಶಸ್ತ್ರಾಭ್ಯಾಸ ಇಲ್ಲದ ವ್ಯಕ್ತಿಗೆ ನಾಯಕತ್ವ ನೀಡಿದ್ದು, ನುರಿತ ದಂಡನಾಯಕರನ್ನು ಬದಿಗೊತ್ತಿದ್ದು, ಕೊನೆಗೆ ಪ್ರಣಾಳಿಕೆ ಕೂಡ ಬಿಡುಗಡೆ ಮಾಡದೇ ಮೋದಿ ಮಂತ್ರ ಪಠಿಸಿದ್ದು, ಎಲ್ಲವೂ ತಪ್ಪು ನಡೆಗಳೇ.
ಬಿಜೆಪಿ ಮಾಡಿದ 7 ದೊಡ್ಡ ತಪ್ಪುಗಳು
1. ಚುನಾವಣೆಗೆ ಹೋದ ಸಮಯ: ಬಿಜೆಪಿ ಮಾಡಿದ ಮೊದಲ ಅತಿ ದೊಡ್ಡ ತಪ್ಪು ಇದು. ಲೋಕಸಭೆ ಚುನಾವಣೆ ಸಂದರ್ಭದಲ್ಲೇ ದೆಹಲಿ ವಿಧಾನಸಭೆ ಚುನಾವಣೆಗೆ ಹೋಗಿದ್ದರೆ ಬಿಜೆಪಿಗೆ ಇಂತಹ ಹೀನಾಯ ಸ್ಥಿತಿ ಬರುತ್ತಿರಲಿಲ್ಲ. ಕನಿಷ್ಠ ಪಕ್ಷ ಲೋಕಸಭಾ ಚುನಾವಣೆ ನಡೆದ ಕೆಲವೇ ದಿನಗಳಲ್ಲಿ ದೆಹಲಿಯಲ್ಲಿ ಚುನಾವಣೆ ನಡೆಸಿದ್ದರೂ ಅದು ಬಿಜೆಪಿಗೆ ನೆರವಾಗುತ್ತಿತ್ತು. ಆದರೆ ಬಿಜೆಪಿ ಲೋಕಸಭೆ ಚುನಾವಣೆಯ ಗೆಲುವಿನ ಅಮಲಿನಲ್ಲಿ ಮೈ ಮರೆತಂತ್ತಿತ್ತು.
2. ವಿಳಂಬ ಧೋರಣೆ: ಚುನಾವಣೆ ಘೋಷಣೆಯಾದರೂ ಪಕ್ಷವನ್ನು ಯಾರೂ ಮುನ್ನಡೆಸಬೇಕು ಎಂಬ ಗೊಂದಲದಲ್ಲೇ ಬಿಜೆಪಿ ಮುಳುಗಿತ್ತು. ಪಕ್ಷದ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸದೆ ಇರುವುದರಿಂದ ಯಾರೂ ಎಲ್ಲಿಂದ ಸ್ಪರ್ಧಿಸಬೇಕು ಎಂಬ ಗೊಂದಲದಲ್ಲಿ ಅಭ್ಯರ್ಥಿಗಳಿದ್ದರು. ಆದರೆ ಎಎಪಿ ಚುನಾವಣೆ ಘೋಷಣೆಯಾಗುವ ಮುನ್ನವೇ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಪ್ರಕಟಿಸುವ ಮೂಲಕ, ಅಭ್ಯರ್ಥಿಗಳು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಮತದಾರರನ್ನು ನೇರವಾಗಿ ಸಂಪರ್ಕಿಸಲು ಸಾಕಷ್ಟು ಕಾಲಾವಕಾಶ ನೀಡಿತು.
3. ಕಿರಣ್ ಬೇಡಿಯನ್ನು ಸಿಎಂ ಅಭ್ಯರ್ಥಿ ಎಂದು ಘೋಷಿಸಿದ್ದು: ಪಕ್ಷಕ್ಕಾಗಿ ದುಡಿದ ಹಿರಿಯರನ್ನು ನಿರ್ಲಕ್ಷಿಸಿ ಹೊಸ ಕಾರ್ಯತಂತ್ರದ ಮೂಲಕ ಚುನಾವಣೆ ಗೆಲ್ಲುತ್ತೇವೆ ಎಂಬ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ನಿರ್ಧಾರಗಳ ಬಗ್ಗೆ ಪಕ್ಷದ ನಿಷ್ಠಾವಂತ ಕಾರ್ಯಕರ್ತರಲ್ಲಿ ಸಮಾಧಾನ ಇರಲಿಲ್ಲ. ಬಿಜೆಪಿ ಸ್ಥಳೀಯ ನಾಯಕರು ಹೇಳುವ ಪ್ರಕಾರ, ಏಕಾಏಕಿ ಕಿರಣ್ ಬೇಡಿ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿದಾಗಲೇ ಬಿಜೆಪಿ ಶೇ.50ರಷ್ಟು ಸೋಲು ಅನುಭವಿಸಿತ್ತು. ಹೀಗಾಗಿ ಬಿಜೆಪಿ ಭದ್ರಕೋಟೆಯಾಗಿದ್ದ ಕೃಷ್ಣ ನಗರದಲ್ಲೇ ಕಿರಣ್ ಬೇಡಿ ಸೋಲು ಅನುಭವಿಸಬೇಕಾಯಿತು.
4. ನಕರಾತ್ಮಕ ಪ್ರಚಾರ: ಕೇಜ್ರಿವಾಲ್ ಅವರನ್ನು ದ್ರೋಹಿ, ಮೋಸಗಾರ ಎಂದೆಲ್ಲ ಬಹಿರಂಗ ಪ್ರಚಾರ ಮಾಡಲಾಯಿತು. ಪತ್ರಿಕೆಗಳಲ್ಲಿ ಪೂರ್ಣಪುಟದ ಕಾರ್ಟೂನುಗಳ ಮೂಲಕ ಅವರ ಆಡಳಿತ ಅಸಾಮರ್ಥ್ಯವನ್ನು ಹೀಗಳೆಯಲಾಯಿತು. ಪ್ರಧಾನಿ ಮೋದಿ ಕೂಡ ಕೇಜ್ರಿವಾಲ್ ವಿರುದ್ಧ ವಾಗ್ದಾಳಿ ನಡೆಸಿದರು. ಚುನಾವಣಾ ಪೂರ್ವ ಮಾಧ್ಯಮ ಸಮೀಕ್ಷೆಗಳನ್ನು-ದುಡ್ಡಿಗಾಗಿ ಮಾಧ್ಯಮಗಳು ಸಮೀಕ್ಷೆ ನಡೆಸಿವೆ ಎಂದು ಮೋದಿ ಲೇವಡಿ ಮಾಡಿದ್ದರು. ಕೇಜ್ರಿವಾಲ್ ಸದಾ ಬಳಸುತ್ತಿದ್ದ ಮಫ್ಲರ್ ಬಗ್ಗೆಯೂ ಬಿಜೆಪಿ ನಾಯಕರು ಗೇಲಿ ಮಾಡಿದ್ದರು.
5. ಕಾಂಗ್ರೆಸ್‌ನ ಸಾಂಪ್ರದಾಯಿಕ ಮತ ಸೆಳೆಯುವಲ್ಲಿ ವಿಫಲ: ಕಾಂಗ್ರೆಸ್‌ನ ಸಾಂಪ್ರದಾಯಿಕ ಮತವಾದ ಅಲ್ಪಸಂಖ್ಯಾತ ಮತದಾರರನ್ನು ಸೆಳೆಯುವಲ್ಲಿ ಬಿಜೆಪಿ ವಿಫಲವಾಯಿತು. ಅಲ್ಪಸಂಖ್ಯಾತ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿರುವ ಚಾಂದಿನಿ ಚೌಕ್ ಮತ್ತು ಮುಸ್ತಫಬಾದ್ ಕ್ಷೇತ್ರಗಳಲ್ಲಿ ಎಎಪಿ ಪಕ್ಷ ತಮ್ಮ ವಿರೋಧಿಗಳನ್ನು ಮೀರಿ ಮುನ್ನಡೆದಿರುವುದು, ಮುಸ್ಲಿಂ ಮತದಾದರು ಎಎಪಿ ಪಕ್ಷಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಮತ ಹಾಕಿರುವುದು ಸ್ಪಷ್ಟವಾಗುತ್ತದೆ.
6. ಸೂಟು - ಮಫ್ಲರ್ ಹಣಾಹಣಿ: ಮೋದಿ ಪ್ರಚಾರಕ್ಕೆ ಇಳಿದಾಗ ದೆಹಲಿ ಚುನಾವಣೆ ಮಫ್ಲರ್ ಮ್ಯಾನ್ ಮತ್ತು ದಶಲಕ್ಷ ರೂಪಾಯಿ ಸೂಟುಧಾರಿಯ ನಡುವಿನ ಹಣಾಹಣಿಯಾಗಿ ಪರಿವರ್ತನೆಯಾಯ್ತು. ಗಣರಾಜ್ಯೋತ್ಸವಕ್ಕೆ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಬಂದಾಗ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಅಷ್ಟೇ ಅಲ್ಲ, ಇಡೀ ವಿಶ್ವದ ಮಾಧ್ಯಮಗಳ ಕೇಂದ್ರ ಬಿಂದು ಆಗಿ ಪ್ರಚಾರ ಪಡೆಯುತ್ತಿದ್ದರೆ, ಆಮ್ ಆದ್ಮಿ ಪಕ್ಷ ಮಾತ್ರ ದೆಹಲಿಯ ಸ್ಲಮ್ಮುಗಳಲ್ಲಿ ಮನೆ ಮನೆಗಳಿಗೆ ತೆರಳಿ ವ್ಯಾಪಕ ಪ್ರಚಾರ ಕೈಗೊಂಡಿತು. ನರೇಂದ್ರ ಮೋದಿ ಸ್ವನಾಮ ಸೂಟ್ ತೊಟ್ಟು ಪ್ರಚಾರ ಗಿಟ್ಟಿಸಿದಾಗ ದೆಹಲಿ ಜನತೆ ಆಲೋಚಿಸಿದ್ದೇ ಬೇರೆ.
ನಮಗೆ ದಶಲಕ್ಷ ರುಪಾಯಿ ಸ್ವನಾಮ ಸೂಟುಧಾರಿ ಬೇಕೋ? ಮಫ್ಲರ್ ತೊಟ್ಟು ನಮ್ಮ ನಡುವೆಯೇ ಓಡಾಡಿಕೊಂಡಿರುವ ಆಮ್ ಆದ್ಮಿ ಕೇಜ್ರಿವಾಲ್ ಬೇಕೋ ಎಂಬ ಪ್ರಶ್ನೆಗೆ ಮತಗಟ್ಟೆಯಲ್ಲಿ ಜನತೆ ಉತ್ತರ ನೀಡಿದ್ದಾರೆ.
7. ಸ್ಥಳೀಯ ನಾಯಕರ ಕಡೆಗಣನೆ: ಸ್ಥಳೀಯ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಚುನಾವಣಾ ಸಮರಕ್ಕೆ ಸಜ್ಜುಗೊಳಿಸದೇ, ಪ್ರಧಾನಿ ಮೋದಿ ಅವರನ್ನೇ ನಂಬಿಕೊಂಡಿದ್ದು ಬಿಜೆಪಿ ಸೋಲಿಗೆ ಮತ್ತೊಂದು ಕಾರಣ.
Advertisement