
ನವದೆಹಲಿ: ಹೈವೇಗಳಲ್ಲಿ ಜನರ ಮೇಲೆ ಬೀಳುತ್ತಿರುವ ಹೊರೆಯನ್ನು ತಪ್ಪಿಸಲು ಫೆಬ್ರವರಿ ಕೊನೆಗೆ ೧೨೫ ಟೋಲ್ ಗಳನ್ನು ರದ್ದು ಮಾಡುವುದಾಗಿ ಕೇಂದ್ರ ಸರ್ಕಾರ ತಿಳಿಸಿದೆ.
"ಈ ತಿಂಗಳ ಕೊನೆಗೆ ಸುಮಾರು ೧೨೫ ಟೋಲ್ ಗಳನ್ನು ರದ್ದು ಮಾಡಲಿದ್ದೇವೆ" ಎಂದು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.
ಈಗಾಗಲೇ ಸುಮಾರು ೬೫ ರಸ್ತೆ ಯೋಜನೆಗಳಲ್ಲಿ ಟೋಲ್ ಹಣ ಪಡೆಯುವುದನ್ನು ನಿಲ್ಲಿಸಲಾಗಿದೆ ಎಂದು ಕೂಡ ಸಚಿವರು ತಿಳಿಸಿದ್ದಾರೆ. ಹಾಗೆಯೆ ೫೦ ಕೋಟಿಗೂ ಕಡಿಮೆ ಹೂಡಿಕೆಯ ರಸ್ತೆ ನಿರ್ಮಾಣ ಯೋಜನೆಗಳನ್ನು ಟೋಲ್ ರಹಿತ ಮಾಡಲು ಸರ್ಕಾರ ನಿಶ್ಚಯಿಸಿದೆ ಎಂದಿದ್ದಾರೆ.
ಎಲೆಕ್ಟ್ರಾನಿಕ್ ಟೋಲ್ (ಇ-ಟೋಲ್) ಪರಿಚಯಿಸುತ್ತಿರುವುದರಿಂದ ಸುಮಾರ್ ೮೮ ಸಾವಿರ ಕೋಟಿ ಉಳಿತಾಯವಾಗಲಿದ್ದು, ಟೋಲ್ ತಡೆಗಳಲ್ಲಿ ಕಾಯುವ ಸಮಯ ಕೂಡ ಗಣನೀಯ ಇಳಿಮುಖವಾಗಲಿದೆ ಎಂದು ಐಐಎಂ ಕೊಲ್ಕೊತ್ತ ಅಧ್ಯಯನವೊಂದನ್ನು ಸೂಚಿಸಿ ಹೇಳಿದ್ದಾರೆ.
ಈ ಅಧ್ಯನದ ಪ್ರಕಾರ "ಈ ಟೋಲ್ ತಡೆಗಳಲ್ಲಿ ಆಗುವ ವಿಳಂಬದಿಂದ ಸುಮಾರು ೬೦ ಸಾವಿರ ಕೋಟಿ ನಷ್ಟವಾಗುತ್ತಿದೆ. ಇ-ಟೋಲ್ ಮೂಲಕ ಸುಮಾರು ೮೮ ಸಾವಿರ ಕೋಟಿ ಉಳಿಸಬಹುದು" ಎನ್ನಲಾಗಿದೆ.
ಮುಂಬೈನ 350 ಟೋಲ್ ತಡೆಗಳಲ್ಲಿ ೧೪೦ ತಡೆಗಳನ್ನು ಈಗಾಗಲೇ ಇ-ಟೋಲ್ ಗಳಾಗಿ ಪರಿವರ್ತಿಸಲಾಗಿದೆ ಎಂದಿದ್ದಾರೆ ಗಡ್ಕರಿ.
Advertisement