
ಮುಂಬೈ: ೧೯೯೫ ರಲ್ಲಿ ನಡೆದ ಮುಂಬೈ ನಗರದ ರಿಯಲ್ ಎಸ್ಟೇಟ್ ಉದ್ಯಮಿ ಪ್ರದೀಪ್ ಜೈನ್ ಅವರ ಕೊಲೆ ಆರೋಪದಲ್ಲಿ, ಭಾರತಕ್ಕ ಗಡಿಪಾರಾಗಿರುವ ಅಬು ಸಲೇಂ ಮತ್ತು ಇನ್ನಿತರ ಇಬ್ಬರು ಆರೋಪಿಗಳನ್ನು ತಪ್ಪಿತಸ್ಥರು ಎಂದು ವಿಶೇಷ ಟಾಡಾ ನ್ಯಾಯಾಲಯ ಸೋಮವಾರ ಮುಂಬೈನಲ್ಲಿ ತೀರ್ಪು ನೀಡಿದೆ.
೨೦೦೫ ರಲ್ಲಿ ಭಾರತಕ್ಕೆ ಗಡಿಪಾರಾದ ನಂತರ ತಪ್ಪಿತಸ್ಥ ಎಂದು ಸಾಬೀತಾಗಿರುವ ಮೊದಲ ಪ್ರಕರಣ ಇದು. "ಐಪಿಸಿ ಸೆಕ್ಷನ್ ೩೦೨(ಕೊಲೆ) ೧೨೦ ಬಿ (ಪಿತೂರಿ) ಅಡಿ ಅಬು ಸಲೇಂ ತಪ್ಪಿತಸ್ಥ ಎಂದು ಸಾಬೀತಾಗಿದೆ" ಎಂದು ವಿಶೇಷ ಪಬ್ಲಿಕ್ ಪ್ರಾಸೆಕ್ಯೂಟರ್ ಉಜ್ವಲ್ ನಿಕಂ ತಿಳಿಸಿದ್ದಾರೆ.ತಪ್ಪಿತಸ್ಥರೆಂದು ಸಾಬೀತಾಗಿರುವ ಇನ್ನಿಬ್ಬರು ಆರೋಪಿಗಳು ವೀರೇಂದ್ರ ಜಂಬ್ ಮತ್ತು ಮೆಹಂದಿ ಹಸ್ಸನ್.
ಪೊಲೀಸರ ಆರೋಪದ ಪ್ರಕಾರ ೧೯೯೫ ಮಾರ್ಚ್ ೭ ರಂದು ತಮ್ಮ ಬೃಹತ್ ಬಂಗಲೆಯನ್ನು ತೊರೆಯಲು ನಿರಾಕರಿಸಿದ್ದಕ್ಕೆ ಅವರ ಜುಹೂ ಬಂಗಲೆ ಹೊರಗೆ ಗುಂಡಿನ ದಾಳಿಗೆ ಆಹುತಿಯಾಗಿದ್ದರು.
ಈ ಪ್ರಕರಣದಲ್ಲಿ ಸಲೇಂ, ಹಾಗು ರಿಯಲ್ ಎಸ್ಟೇಟ್ ಉದ್ಯಮಿಗಳಾದ ಜಂಬ್ ಮತ್ತು ಹಸ್ಸನ್ ವಿಚಾರಣೆ ಹೆದರಿಸುತ್ತಿದ್ದರು. ಮತ್ತೊಬ್ಬ ಆರೋಪಿ ನಯೀಮ್ ಖಾನ್ ತಪ್ಪೊಪ್ಪಿಕೊಂಡಿದ್ದರು. ಇನ್ನೊಬ್ಬ ಆರೋಪಿ ರಿಯಾಜ್ ಸಿದ್ಧಿಕಿ ಮೊದಲು ತಪ್ಪೊಪ್ಪಿಕೊಂಡಿದ್ದರೂ ನಂತರ ನ್ಯಾಯಾಲಯದಲ್ಲಿ ಉಲ್ಟಾ ಹೊಡೆದಿದ್ದರು. ನಂತರ ಸಿದ್ಧಿಕಿ ಅವರ ವಿಚಾರಣೆಯನ್ನು ಬೇರ್ಪಡಿಸಲಾಗಿತ್ತು.
೧೯೯೩ ರ ಮುಂಬೈ ಸರಣಿ ಬಾಂಬ್ ಸ್ಫೋಟ ಆರೋಪಿ ಅಬು ಸೇಲಂನನ್ನು ಪೋರ್ಚುಗಲ್ ನಿಂದ ೨೦೦೫ ೧೧ ನವೆಂಬರ್ ನಲ್ಲಿ ಭಾರತಕ್ಕೆ ಗಡಿಪಾರು ಮಾಡಲಾಗಿತ್ತು.
Advertisement