
ಮಧುರೈ: ಫೆಬ್ರವರಿ ೨೪ ರಂದು ಹುಟ್ಟುವ ಮಕ್ಕಳಿಗೆ ಮತ್ತು ಅವರ ಪೋಷಕರಿಗೆ ಒಂದು ಸಿಹಿ ಸುದ್ದಿ. ಈ ದಿನ ಎಐಡಿಎಂಕೆ ಸುಪ್ರಿಮೋ ಜೆ ಜಯಲಲಿತಾ ಅವರ ಜನ್ಮ ದಿನವಾಗಿರುವುದರಿಂದ ಆ ದಿನ ಹುಟ್ಟಿದ ಮಕ್ಕಳಿಗೆ ತ್ವರಿತವಾಗಿ ಜನನ ಪ್ರಮಾಣಪತ್ರವನ್ನು ನೀಡಲು ನಗರ ಪಾಲಿಕೆ ನಿರ್ಧರಿಸಿದೆ. ಅದೂ ಉಚಿತವಾಗಿ! ಸೋಮವಾರ ಈ ಘೋಷಣೆಯನ್ನು ಮಾಡಿದ ಮೇಯರ್ ವಿ ವಿ ರಾಜನ್, ಈ ನಿಟ್ಟಿನಲ್ಲಿ ನಿರ್ಣಯವನ್ನು ಮಂಡಿಸಲು ಮಂಗಳವಾರ ನಗರಪಾಲಿಕೆಯ ವಿಶೇಷ ಸಭೆಯನ್ನು ಕರೆಯಲಾಗುವುದು ಎಂದಿದ್ದಾರೆ.
ಇದಕ್ಕೂ ಮೊದಲು ವಿದ್ಯುಚ್ಚಕ್ತಿ ಸಚಿವ ನಾಥಂ ಆರ್ ವಿಶ್ವನಾತ್ ಅವರು ಸರ್ಕಾರಿ ರಾಜಾಜಿ ಆಸ್ಪತ್ರೆಯಲ್ಲಿ ಮಂಗಳವಾರ ಹುಟ್ಟುವ ಎಲ್ಲ ಮಕ್ಕಳಿಗೂ ಚಿನ್ನದ ಉಂಗುರು ಕೊಡುವುದಾಗಿ ಹೇಳಿದ್ದರು. ಗುರುವಾರ ನಡೆಯಲಿರುವ ಕಾರ್ಯಕ್ರಮದಲ್ಲಿ ಈ ಉಂಗುರುಗಳನ್ನು ವಿತರಿಸಲಿದ್ದಾರೆ ಎನ್ನಲಾಗಿದೆ.
ಸಾಮಾನ್ಯವಾಗಿ ಜನನ ಪ್ರಮಾಣಪತ್ರ ಪಡೆಯಲು ವಾರಾನುಗಟ್ಟಲೆ ಸಮಯ ಹಿಡಿಯುತ್ತದೆ. ಕೆಲವೊಮ್ಮೆ ತಿಂಗಳುಗಳು ಕಳೆಯುವುದುಂಟು.
Advertisement