
ನವದೆಹಲಿ: ಕೇಂದ್ರದ ಎನ್ ಡಿ ಎ ಸರ್ಕಾರ ಜಾರಿಗೆ ತರಲು ಪ್ರಯತ್ನಿಸುತ್ತಿರುವ ಭೂ ಸ್ವಾಧೀನ ಸುಗ್ರೀವಾಜ್ಞೆ ಅಸಂವಿಧಾನಿಕ ಮತ್ತು ಕೈಗಾರಿಕೋದ್ಯಮಿಗಳಿಗೆ ಸಹಕರಿಸಲು ಇಟ್ಟಿರುವ ಈ ನಡೆಯಿಂದ ಸರ್ಕಾರ ಹಿಂದೆ ಸರಿಯುವಂತೆ ಆಗ್ರಹಿಸಿ ಬಜೆಟ್ ಅಧಿವೇಶನದ ಮೊದಲ ದಿನ ಅಣ್ಣಾ ಹಜಾರೆ ಸೋಮವಾರ ಎರಡು ದಿನದ ಧರಣಿ ಪ್ರಾರಂಭಿಸಿದ್ದಾರೆ.
ಜಂತರ್ ಮಂತರ್ ನಲ್ಲಿ ನಡೆಯುತ್ತಿರುವ ಈ ಧರಣಿಗೆ ಬೇರೆ ಬೇರೆ ರಾಜ್ಯಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಭಾಗವಹಿಸಿದ್ದು, ಹರ್ಯಾಣದಿಂದ ರೈತರು ಪಥಯಾತ್ರೆ ಹೊರಟಿದ್ದು ಮಂಗಳವಾರ ಪ್ರತಿಭಟನಕಾರರ ಸಂಖ್ಯೆ ಇನ್ನೂ ಹೆಚ್ಚಲಿದೆ. ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಕೂಡ ಸೋಮವಾರ ಸಂಜೆ ಅಣ್ಣಾ ಹಜಾರೆ ಅವರನ್ನು ಭೇಟಿ ಮಾಡಿದ್ದು, ಈ ಧರಣಿಗೆ ಎಎಪಿ ಪಕ್ಷದ ಬೆಂಬಲವನ್ನು ಘೋಷಿಸಿದ್ದಾರೆ. ಕೇಜ್ರಿವಾಲ್ ಮಂಗಳವಾರ ಧರಣಿಯನ್ನು ಕೂಡುತ್ತಾರೆ ಎಂದು ನಿರೀಕ್ಷಿಸಲಾಗಿದೆ.
ಸಾಮಾಜಿಕ ಕಾರ್ಯಕರ್ತರಾದ ಮೇಧಾ ಪಾಟ್ಕರ್, ರಾಜೇಂದ್ರ ಸಿಂಗ್ ಮತ್ತಿತರ ರೈತ ನಾಯಕರು ಕೂಡ ಈ ಧರಣಿಯಲ್ಲಿ ಭಾಗವಹಿಸಿದ್ದಾರೆ.
ಅಣ್ಣಾಗೆ ಬೆಂಬಲ ಕೊಟ್ಟ ಅಸ್ಸಾಂ ಸರ್ಕಾರ
ಗೌಹಾಟಿ: ಭೂ ಸ್ವಾಧೀನ ಸುಗ್ರೀವಾಜ್ಞೆಯ ವಿರುದ್ಧದ ಅಣ್ಣಾ ಧರಣಿಗೆ ಅಸ್ಸಾಂ ಸರ್ಕಾರ ತನ್ನ ಬೆಂಬಲ ವಿಸ್ತರಿಸಿದೆ. ಜನ ಮತ್ತು ರೈತ ವಿರೋಧಿ ಕಾಯ್ದೆಗಳನ್ನು ನಮ್ಮ ಸರ್ಕಾರ ಯಾವತ್ತಿಗೂ ವಿರೋಧಿಸಿದೆ ಎಂದಿರುವ ಮುಖ್ಯಮಂತ್ರಿ ತರುಣ್ ಗೊಗೊಯ್ "ಈ ಭೂ ಸುಗ್ರೀವಾಜ್ಞೆ ಜನ ವಿರೋಧಿ ಹಾಗು ಇದು ಧನವಂತರ ಹಿತಾಸಕ್ತಿಗಳನ್ನು ಕಾಪಾಡಲು ಮಾಡಿರುವ ಕಾಯ್ದೆ" ಎಂದಿದ್ದಾರೆ.
Advertisement