
ಲಂಡನ್: ಕಾಣೆಯಾಗಿರುವ ಮೂವರು ಬ್ರಿಟಿಶ್ ಶಾಲಾ ವಿದ್ಯಾರ್ಥಿನಿಯರ ಬಗ್ಗೆ ತನಿಖೆ ನಡೆಸುತ್ತಿರುವ ಪೊಲೀಸರ ಪ್ರಕಾರ ಈ ಯುವತಿಯರು ಟರ್ಕಿಯನ್ನು ದಾಟಿ ಸಿರಿಯಾದತ್ತ ಮುಖ ಮಾಡಿದ್ದಾರೆ. ಯೂರೋಪ್ ನಿಂದ ಭಯೋತ್ಪಾದಕ ಸಂಘಟನೆ ಇಸ್ಲಾಮಿಕ್ ಸ್ಟೇಟ್ ಸೇರಲು ಹೊರಟಿರುವ ಇತರ ಹೆಣ್ಣುಮಕ್ಕಳನ್ನು ಕೂಡಿಕೊಳ್ಳಲಿದ್ದಾರೆ ಎನ್ನಲಾಗಿದೆ.
೧೫ ರಿಂದ ೧೬ ವರ್ಷದ ಒಳಗಿನ ಬಿರ್ಟಿಶ್ ಹುಡುಗಿಯರು ಕಾಣೆಯಾಗಿರುವುದು, ಇಸ್ಲಾಮಿಕ್ ಸ್ಟೇಟ್ ಸಂಘಟನೆ, ಬ್ರಿಟನ್ ಮತ್ತು ಯೂರೋಪಿನಿಂದ ಜನರನ್ನು ತನ್ನೆಡೆ ಸೆಳೆಯುತ್ತಿರುವ ಆತಂಕವನ್ನು ಹೆಚ್ಚುಮಾಡಿದೆ.
ಭದ್ರತಾ ಅಧಿಕಾರಿಗಳ ಪ್ರಕಾರ ಸುಮಾರು ೫೦೦ ಜನ ಬ್ರಿಟನ್ ನಾಗರಿಕರು ಇಸ್ಲಾಮಿಕ ಭಯೋತ್ಪಾದನ ಸಂಘಟನೆ ಸೇರಲು ಟರ್ಕಿಯ ಮೂಲಕ ಸಿರಿಯಾಗೆ ಹೋಗಿದ್ದಾರೆ. ಅದರಲ್ಲಿ ಸುಮಾರ್ ೫೦ ಜನ ಮಹಿಳೆಯರು ಎಂಬುದು ಪಂಡಿತರ ಲೆಕ್ಕಾಚಾರ.
ಈಗ ಸದ್ಯಕ್ಕೆ ಕಾಣೆಯಾಗಿರುವ ಮೂವರು ಹೆಣ್ಣುಮಕ್ಕಳು ಲಂಡನ್ನಿನ ಪ್ರತಿಷ್ಟಿತ ಶಾಲೆಯ ವಿದ್ಯಾರ್ಥಿಗಳು. ಫೆಬ್ರವರಿ ೧೭ರಿಂದ ಇವರು ಕಾಣೆಯಾಗಿದ್ದಾರೆ. ಅಧಿಕಾರಿಗಳ ಪ್ರಕಾರ ಇವರು ಮೊದಲು ಟರ್ಕಿಯ ಇಸ್ತಾನ್ಬುಲ್ ಗೆ ವಿಮಾನದ ಮೂಲಕ ತೆರಳಿದ್ದಾರೆ.
ಶಮೀಮಾ ಬೇಗಮ್ (೧೫), ಕದೀಜಾ ಸುಲ್ತಾನ (೧೬) ಅಮೀರಾ ಅಬೇಸ್ (೧೫) ಕಾಣೆಯಾಗಿರುವ ವಿದ್ಯಾರ್ಥಿನಿಯರು. ಇವರ ಕುಟುಂಬದವರು ಮನೆಗೆ ಹಿಂದಿರುಗುವಂತೆ ಮನವಿ ಮಾಡಿದ್ದಾರೆ.
Advertisement