
ಚೆನ್ನೈ: ತಮ್ಮ ಕಾದಂಬರಿ 'ಮಾಧೋರ್ಭಾಗನ್'(ಅರ್ಧನಾರೀಶ್ವರ) ಕೃತಿಯ ವಿವಾದದಲ್ಲಿ ನನ್ನೊಳಗಿನ ಲೇಖಕ ಸತ್ತು ಹೋದ ಎಂದಿದ್ದ ಲೇಖಕ ಪೆರುಮಾಳ್ ಮುರುಗನ್ ಕೊನೆಗೂ ತಮ್ಮ ಮೌನವನ್ನು ಕೊನೆಗಾಣಿಸಿದ್ದಾರೆ. ಮದ್ರಾಸ್ ಹೈಕೋರ್ಟ್ ವಿಚಾರಣೆ ವೇಳೆ ತಮ್ಮ ಬರಹವನ್ನು ಸಮರ್ಥಿಕೊಂಡಿರುವ ಲೇಖಕ, ನಾನು ಬರಹಗಾರನಾಗಿ ನನ್ನ ಕೆಲಸ ಮಾಡಿದ್ದೇನೆ ಎಂದಿದ್ದಾರೆ. ಕಡೆಗಣಿಸಿದವರ ಮೇಲೆ ಪುರುಷ ಪ್ರಧಾನ ಸಾಮಾಜಿಕ ಮೌಲ್ಯಗಳನ್ನು ಹೇರುವುದರ ವಿರುದ್ಧ ಪ್ರಶ್ನಿಸಿದ್ದಾರೆ.
ನಾಮಕ್ಕಲ್ ನಲ್ಲಿ ಜಿಲ್ಲಾಧಿಕಾರಿ ಸಮ್ಮುಖದಲ್ಲಿ ನಡೆದ ಶಾಂತಿ ಸಭೆಯಲ್ಲಿ ಕ್ಷಮೆ ಕೋರುವಂತೆ ನನಗೆ ಒತ್ತಡ ಹೇರಲಾಯಿತು ಎಂದು ವಿವರಿಸಿವ ಮುರುಗನ್, ಯಾವುದೇ ಒತ್ತಡ ಮತ್ತು ಭಯದ ವಾತಾವರಣದಲ್ಲಿ ಬರಹ ಮಾಡುವುದು ದುರ್ಲಭ ಆದುದರಿಂದಲೇ ನನ್ನೊಳಗಿನ ಲೇಖಕ ಸತ್ತುಹೋಗಿದ್ದು ಎಂದು ಸಮರ್ಥಿಸಿಕೊಂಡಿದ್ದಾರೆ.
ನಾನು ಲಿಖಿತ ರೂಪದಲ್ಲಿ ವಿಷಾದ ವ್ಯಕ್ತಪಡಿಸಿದ್ದೆ. ಆದರೆ ಜಿಲ್ಲಾಧಿಕಾರಿ ಅದನ್ನು "ಬೇಷರತ್ ಕ್ಷಮೆ' ಎಂದು ಬದಲಾಯಿಸಿ ನನ್ನ ಸಹಿಗೆ ಒತ್ತಾಯಿಸಿದರು ಎಂದಿದ್ದಾರೆ.
"ಬರಹಗಾರನ ಕೆಲಸ ಸಾಮಾಜಿಕ ಮೌಲ್ಯಗಳನ್ನು ಪ್ರಶ್ನಿಸುವುದು ಮತ್ತು ಅವುಗಳನ್ನು ತೀರ್ವ ಪರೀಕ್ಷೆಗೆ ಒಡ್ಡುವುದು. ಅವನು ಎಲ್ಲವನ್ನೂ ಯಾಂತ್ರಿಕವಾಗಿ ಒಪ್ಪಿಕೊಳ್ಳಬೇಕಿಲ್ಲ. ನಿಯಮಗಳನ್ನು ಹಾಕುವ ಸಮಾಜ ಅವುಗಳಿಂದ ನುಣುಚಿಕೊಳ್ಳುವ ಅವಕಾಶವನ್ನೂ ನೀಡುತ್ತದೆ. ಇಂತಹ ನಿಯಮ ಬಾಹಿರಗಳ ಮೇಲೆ ಬರೆಯುವುದು ಲೇಖಕನಿಗೆ ಸಾಮಾನ್ಯ. ಸಮಾಜ ನಿಯಮಗಳನ್ನು ಎತ್ತಿ ಹಿಡಿದರೆ, ಲೇಖಕ ನಿಯಮ ಬಾಹಿರಗಳನ್ನು ಎತ್ತಿಹಿಡಿಯುತ್ತಾನೆ. ಸಂತ್ರಸ್ತನ ಕಡೆಯ ಕಥೆಯನ್ನು ತಿಳಿದುಕೊಳ್ಳುವ ಮಾರ್ಗ ಅದು. ಇಲ್ಲದಿದ್ದರೆ ಸಂತ್ರಸ್ತನ ಧ್ವನಿ ಒಣಗಿಹೋಗುತ್ತದೆ ಮತ್ತು ಅವನನ್ನು ಕಡೆಗಣಿಸಲಾಗುತ್ತದೆ" ಎಂದು ತಮ್ಮ ಊರಾದ ನಾಮಕ್ಕಲ್ ನಿಂದ ಈಗ ಚೆನ್ನೈ ಗೆ ವರ್ಗಾಂತರವಾಗಿ ನೆಲೆಸಿರುವ ಮುರುಗನ್ ತಮ್ಮ ಅರ್ಜಿಯಲ್ಲಿ ತಿಳಿಸಿದ್ದಾರೆ.
ಮುರುಗನ್ ಅವರ ಕಾದಂಬರಿಯಲ್ಲಿ ತಮ್ಮ ಸಮುದಾಯವನ್ನು ಕೆಟ್ಟದ್ದಾಗಿ ಚಿತ್ರಿಸಿದ್ದಾರೆ ಎಂದು ದೂರಿ, ಗೌಂಡರ್ ಸಮುದಾಯ ಮತ್ತು ಇನ್ನಿತರ ಕೆಲವು ಸಂಘಟನೆಗಳು ಲೇಖಕನ ವಿರುದ್ಧ ಸಮರ ಸಾರಿದ್ದವು.
Advertisement