
ನವದೆಹಲಿ: ತಾನು ಲೋಕಸಭೆಯಲ್ಲಿ ಅಸಂಸದೀಯ ಪದಗಳನ್ನು ಬಳಸಿಲ್ಲ ಎಂದು ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಹೇಳಿದ್ದಾರೆ.
ಲೋಕಸಭೆಯಲ್ಲಿಂದು ವಿಪಕ್ಷಗಳು ಗದ್ದಲವೆಬ್ಬಿಸಿದ್ದು, ಇದಕ್ಕೆ ಪ್ರತಿಕ್ರಿಯಿಸಿದ ನಾಯ್ಡು ನಾನು ವಿಪಕ್ಷಗಳನ್ನು ಗೌರವಿಸುತ್ತೇನೆ. ನಾನು ಇಲ್ಲಿ ಯಾವುದೇ ಅಸಂಸದೀಯ ಪದಗಳನ್ನು ಬಳಸಿಲ್ಲ ಎಂದು ಹೇಳಿದ್ದಾರೆ.
ಯಾರಿಗೂ ನೋವುಂಟು ಮಾಡುವುದು ನನ್ನ ಉದ್ದೇಶವಾಗಿರಲಿಲ್ಲ. ನಾನು ಆ ಹೇಳಿಕೆಯನ್ನು ನೀಡುವಾಗ ನನ್ನ ಮನಸ್ಸಲ್ಲಿ ಯಾವುದೇ ಪಕ್ಷ ಅಥವಾ ವ್ಯಕ್ತಿಯ ಮೇಲೆ ದ್ವೇಷ ಇರಲಿಲ್ಲ ಎಂದು ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು ಹೇಳಿದ್ದಾರೆ.
ಲೋಕಸಭೆಯಲ್ಲಿ ರೈಲ್ವೇ ಬಜೆಟ್ ಮಂಡನೆಯ ಮುನ್ನ ಮಾತನಾಡಿದ ನಾಯ್ಡು ಅಲ್ಪಸಂಖ್ಯಾತರಿಗೆ ಬಹುಸಂಖ್ಯಾತರನ್ನು ತುಳಿಯಲು ಆಗುವುದಿಲ್ಲ ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆಯನ್ನು ವಿಪಕ್ಷಗಳು ಖಂಡಿಸಿದ್ದು ನಾಯ್ಡು ಅವರು ಕ್ಷಮೆ ಕೇಳಬೇಕೆಂದು ಪಟ್ಟು ಹಿಡಿದಿದ್ದವು. ಮಾತ್ರವಲ್ಲದೆ ರೈಲ್ವೇ ಬಜೆಟ್ ಭಾಷಣಕ್ಕೆ ತಾವು ತಡೆಯೊಡ್ಡುವುದಾಗಿ ಬೆದರಿಕೆಯನ್ನು ನೀಡಿದ್ದವು.
ಇದರಿಂದಾಗಿ ಸದನದಲ್ಲಿ ಗದ್ದಲ ಸೃಷ್ಟಿಯಾಗಿದ್ದು 11.30ರ ವರೆಗೆ ಕಲಾಪವನ್ನು ಮುಂದೂಡಲಾಗಿತ್ತು.
Advertisement