ಬೀಜಗಣಿತ, ಪೈಥಾಗೊರಸ್ ಪ್ರಮೇಯದ ಮೂಲ ಭಾರತ: ಹರ್ಷವರ್ಧನ್

ಬೀಜಗಣಿತ ಮತ್ತು ಪೈಥಾಗೊರಸ್ ಪ್ರಮೇಯ ಮೂಲದಲ್ಲಿ ರೂಪಗೊಂಡಿದ್ದು...
ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಹರ್ಷವರ್ಧನ್
ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಹರ್ಷವರ್ಧನ್

ಮುಂಬೈ: ಬೀಜಗಣಿತ ಮತ್ತು ಪೈಥಾಗೊರಸ್ ಪ್ರಮೇಯ ಮೂಲದಲ್ಲಿ ರೂಪಗೊಂಡಿದ್ದು ಭಾರತದಲ್ಲೇ ಆದರೆ ಇವುಗಳ ಮನ್ನಣೆ ಬೇರೆ ದೇಶಗಳು ಪಡೆದಿವೆ ಎಂದು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಹರ್ಷವರ್ಧನ್, ಭಾರತೀಯ ವಿಜ್ಞಾನ ಸಮಾವೇಶದಲ್ಲಿ ಇಂದು ಹೇಳಿದ್ದಾರೆ.

ಪ್ರಾಚೀನ ಭಾರತೀಯ ವಿಜ್ಞಾನಿಗಳು ತಾವು ಸಂಶೋಧನೆ ಮಾಡಿದ ಸಂಗತಿಗಳಿಗೆ ಬೇರೆ ದೇಶದವರು ಹೆಸರು ತೆಗೆದುಕೊಳ್ಳಲು ಉದಾರವಾಗಿ ಅವಕಾಶ ನೀಡಿದ್ದಾರೆ ಎಂದು ಭಾರತೀಯ ವಿಜ್ಞಾನ ಸಮಾವೇಶದ ಉದ್ಘಾಟನಾ ಸಮಾರಂಭದಲ್ಲಿ ತಿಳಿಸಿದ್ದಾರೆ.

"ನಮ್ಮ ವಿಜ್ಞಾನಿಗಳು ಪೈಥಾಗೊರಸ್ ಪ್ರಮೇಯವನ್ನು ಕಂಡುಹಿಡಿದರು, ಆದರೆ ನಾವು... ಇದರ ಮನ್ನಣೆಯನ್ನು ಗ್ರೀಕರಿಗೆ ಬಿಟ್ಟುಕೊಟ್ಟೆವು. ಅರಬ್ಬರಿಗೂ ಮುಂಚೆಯೇ ನಮಗೆ ಬೀಜಗಣಿತ ತಿಳಿದಿತ್ತು ಎಂದು ನಮ್ಮೆಲ್ಲರಿಗೂ ತಿಳಿದಿದೆ, ಆದರೆ ನಿಸ್ವಾರ್ಥದಿಂದ ಇದನ್ನು ಆಲ್ಜೀಬ್ರಾ ಎಂದು ಕರೆಯಲು ಬಿಟ್ಟೆವು" ಎಂದಿರುವ ಸಚಿವ ಭಾರತೀಯರು ವಿಜ್ಞಾನವನ್ನು ಎಂದಿಗೂ ಋಣಾತ್ಮಕ ಕೆಲಸಗಳಿಗೆ ಬಳಸಿಲ್ಲ ಎಂದಿದ್ದಾರೆ.

"ಅದು ಖಗೋಳ ಶಾಸ್ತ್ರವಗಲೀ, ವೈದ್ಯ ಶಾಸ್ತ್ರವಾಗಲಿ, ರಸಾಯನಶಾಸ್ತ್ರ, ಭೂಗರ್ಭ ಶಾಸ್ತ್ರವಾಗಲಿ, ನಿಸ್ವಾರ್ಥದಿಂದ ಎಲ್ಲ ಜ್ಞಾನವನ್ನೂ ಹಂಚಿಕೊಂಡಿದ್ದೇವೆ" ಎಂದಿದ್ದಾರೆ.

ಕಳೆದ ವರ್ಷ ಪ್ರಧಾನಿ ಮೋದಿಯವರು ಪ್ರಾಚೀನ ಕಾಲದಲ್ಲಿ ಭಾರತ ವಿಜ್ಞಾನದ ವಿಷಯಗಳಲ್ಲಿ ಹೊಸ ಅಲೆಯನ್ನೇ ಸೃಷ್ಟಿಸಿತ್ತು ಎಂದಿದ್ದರು.

"ಮಹಾಭಾರತದಲ್ಲಿ ಕರ್ಣ ತಾಯಿಯ ಹೊಟ್ಟೆಯಿಂದ ಜನಿಸಲಿಲ್ಲ ಎಂದಿದೆ. ಇದು ಸೂಚಿಸುವುದೇನೆಂದರೆ ನಮಗೆ ಆಗಲೇ ಜೈವಿಕ ವಿಜ್ಞಾನದಲ್ಲಿ ಪರಿಣಿತಿ ಇತ್ತೆಂದು. ಗಣೇಶನಿಗೆ ಆನೆಯ ತಲೆಯನ್ನು ಜೋಡಿಸಿದ ಪ್ಲಾಸ್ಟಿಕ್ ಶಸ್ತ್ರಚಿಕಿತ್ಸ ವೈದ್ಯನೂ ಇದ್ದಿರಬೇಕು" ಎಂದು ಮೋದಿ ಮುಂಬೈ ನಲ್ಲಿ ಹೇಳಿದ್ದರು. ಗಣಿತಜ್ಞ ಆರ್ಯಭಟ ಶತಮಾನಗಳ ಹಿಂದೆ ಹೇಳಿದ ವಿಷಯಗಳನ್ನು ಇಂದು ವಿಶ್ವ ಒಪ್ಪಿಕೊಳ್ಳುತ್ತಿದೆ ಎಂದು ಕೂಡ ಹೇಳಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com