

ಮುಂಬೈ: ಶಿವಸೇನೆಯ ಅಧ್ಯಕ್ಷ ಉದ್ಧವ್ ಠಾಕ್ರೆ ತಾವು ತೆಗೆದಿರುವ ವನ್ಯಜೀವಿ ಛಾಯಾಚಿತ್ರಗಳನ್ನು ಮಂಗಳವಾರ ಪ್ರದರ್ಶನಕ್ಕಿಟ್ಟು ಹರಾಜು ನಡೆಸಲಿದ್ದಾರೆ. ಇದರಿಂದ ಸಂಗ್ರಹವಾಗುವ ನಿಧಿಯನ್ನು ರಾಜ್ಯದಲ್ಲಿ ಸಾಲ ಬಾಧೆಯಿಂದ ನರಳುತ್ತಿರುವ ರೈತರ ಕುಟುಂಬ ಕಲ್ಯಾಣಕ್ಕೆ ಬಳಸಲಾಗುವುದು ಎಂದಿದ್ದಾರೆ.
ಒಂದು ವಾರದವರೆಗೆ ನಡೆಯುವ ಈ ಪ್ರದರ್ಶನ ಮುಂಬೈ ನಗರದ ಪ್ರತಿಷ್ಟಿತ ಜಹಾಂಗೀರ್ ಕಲಾ ಗ್ಯಾಲರಿಯಲ್ಲಿ ನಡೆಯಲಿದ್ದು, ಹರಾಜಿನ ಮೂಲಕ ಹೆಚ್ಚಿನ ನಿಧಿಯನ್ನು ಸಂಗ್ರಹಿಸುವ ಗುರಿಯನ್ನು ಪಕ್ಷ ಹೊಂದಿದೆ.
"ಸಾರ್ವಜನಿಕ ಆಡಳಿತಕ್ಕಾಗಿ ಈ ಪ್ರದರ್ಶನ ನಡೆಸುತ್ತಿಲ್ಲ. ಇದರ ಉದ್ದೇಶ ಸಾಮಾಜಿಕ ಬದ್ಧತೆ. ಸಂಗ್ರಹವಾಗುವ ನಿಧಿಯಿಂದ ಸಾಲ ಭಾಧೆಯಿಂದ ನರಳಿ ಆತ್ಮಹತ್ಯೆ ಮಾಡಿಕೊಂಡ ರೈತರ ಮಕ್ಕಳಿಗೆ ಧನ ಸಹಾಯ ಮಾಡಲು ಉಪಯೋಗಿಸಲಾಗುವುದು" ಎಂದು ಉದ್ಧವ್ ತಿಳಿಸಿದ್ದಾರೆ. ವನ್ಯ ಜೀವಿ ಫೋಟೋಗಳು ಮತ್ತು ಮಹಾರಾಷ್ಟ್ರದ ಕೋಟೆಗಳ ಫೋಟೋಗಳು ಹಾಗೂ ಪಂಡರಾಪುರದ ಭಕ್ತರ ವೈಮಾನಿಕ ಛಾಯಾಚಿತ್ರಗಳು ಈ ಪ್ರದರ್ಶನದ ಭಾಗವಾಗಿವೆ. ಇವುಗಳಲ್ಲದೆ ನಗರದ ಪ್ರಮುಖ ಸ್ಮಾರಕಗಳ ಇನ್ಫ್ರಾರೆಡ್ ಫೋಟೋಗಳು ಕೂಡ ಪ್ರಮುಖ ಆಕರ್ಷಣೆಯಾಗಿದೆ.
"ಛಾಯಾಗ್ರಹಣ ನನ್ನ ಪ್ಯಾಶನ್. ಹುಲಿ ಹುಡುಕಿಕೊಂಡು ನಾನು ಎಲ್ಲ ಅರಣ್ಯಧಾಮಗಳಿಗೂ ಭೇಟಿ ನೀಡಿದ್ದೇನೆ" ಎಂದಿರುವ ಉದ್ಧವ್ ಕೆನಾಡದಲ್ಲಿ ೫ ಡಿಗ್ರಿ ಸೆಂಟಿಗ್ರೇಡ್ ನಲ್ಲಿ ಕೂಡ ವೈಮಾನಿಕ ಫೋಟೋಗ್ರಫಿ ಮಾಡಿದ್ದೇನೆ ಎಂದಿದ್ದಾರೆ. ಆದರೆ ಈ ವೈಮಾನಿಕ ಫೋಟೋಗ್ರಫಿಗೆ ತಗಲಿದ ವೆಚ್ಚವನ್ನು ಬಹಿರಂಗಪಡಿಸಲು ನಿರಾಕರಿಸಿದ್ದಾರೆ.
Advertisement