ಇಸ್ಲಾಮಾಬಾದ್: ಮುಂಬೈ ಸ್ಫೋಟ ದಾಳಿಯ ರೂವಾರಿ ಲಷ್ಕರ್ ಎ ತೊಯ್ಬಾ ಉಗ್ರ ಸಂಘಟನೆಯ ಕಮಾಂಡರ್ ಝಕಿ ಉರ್ ರೆಹಮಾನ್ ಲಖ್ವಿಗೆ ಇಸ್ಲಾಮಾಬಾದ್ ಹೈಕೋರ್ಟ್ ನೀಡಿರುವ ಜಾಮೀನಿಗೆ ಪಾಕಿಸ್ತಾನ ಸುಪ್ರೀಂ ಕೋರ್ಟ್ ಬುಧವಾರ ತಡೆಯಾಜ್ಞೆ ನೀಡಿದೆ. ಈ ಆದೇಶದಿಂದಾಗಿ ಲಖ್ವಿಗೆ ಜೈಲುವಾಸ ಮುಂದುವರಿಸುವಂತಾಗಿದೆ.
ಮುಂಬೈ ದಾಳಿ ಮತ್ತು ಕಾನೂನು ವ್ಯವಸ್ಥೆಗೆ ಧಕ್ಕೆ ತಂದ ಪ್ರಕರಣಗಳಲ್ಲಿ ಕಳೆದ ತಿಂಗಳು ಲಖ್ವಿಗೆ ಜಾಮೀನು ಲಭಿಸಿತ್ತು. ಇನ್ನೇನು ಬಿಡುಗಡೆ ಹೊಂದಬೇಕು ಎನ್ನುವಷ್ಟರಲ್ಲಿ 6 ವರ್ಷ ಹಿಂದಿನ ಅಪಹರಣ ಪ್ರಕರಣಕ್ಕೆ ಮರುಜೀವ ಕೊಟ್ಟು ಪೊಲೀಸರು ಆತನನ್ನು ಬಂಧಿಸಿದ್ದರು.
ಇದಾದನಂತರ ಪಾಕ್ ಸರ್ಕಾರದ ಆದೇಶವನ್ನು ಹೈಕೋರ್ಟ್ ಅಮಾನತು ಮಾಡಿ ಆದೇಶ ನೀಡಿದ್ದು, ಇದನ್ನು ಪ್ರಶ್ನಿಸಿ ಪಾಕ್ ಸರ್ಕಾರ ಸುಪ್ರೀಂ ಕೋರ್ಟ್‌ನ ಮೆಟ್ಟಲೇರಿತ್ತು.
ಲಖ್ವಿಯನ್ನು ಶಾಲೀಮಾರ್ ಪೊಲೀಸ್ ಠಾಣೆಯಲ್ಲಿರಿಸಲಾಗಿದ್ದು, ಮಂಗಳವಾರ ಆತನನ್ನು ನ್ಯಾಯಾಂಗ ಬಂಧನಕ್ಕೊಳಪಡಿಸಿ ಅಡಿಲಾ ಜೈಲಿಗಟ್ಟಲಾಗಿತ್ತು. ಕಳೆದ 5 ವರ್ಷಗಳಿಂದ ಲಖ್ವಿ ಅಡಿಲಾ ಜೈಲಿನಲ್ಲೇ ಬಂಧಿತನಾಗಿದ್ದಾನೆ.