
ಬೆಂಗಳೂರು: ಹಿಂದುಳಿದ ವರ್ಗಕ್ಕೆ ಈಗಾಗಲೇ ಇರುವ ಅನ್ನ ಭಾಗ್ಯ, ಕ್ಷೀರ ಭಾಗ್ಯ ಮತ್ತು ದಂತ ಭಾಗ್ಯದ ಜೊತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈಗ ದೈಹಿಕ ವಿಕಲಾಂಗರ ಶ್ರೇಯೋಭಿವೃದ್ಧಿಗೆ "ಸ್ಕೂಟರ್ ಭಾಗ್ಯ" ಯೋಜನೆಯನ್ನು ಘೋಷಿಸಿದ್ದಾರೆ.
ಅಪಘಾತಗಳಲ್ಲಿ ಕಾಲು ಕಳೆದುಕೊಂಡವರಿಗೆ ಹಾಗೂ ಹುಟ್ಟುವಾಗಲೇ ಹೆಳವರಾಗಿ ಹುಟ್ಟಿದವರಿಗೆ ಮೂರು ಚಕ್ರದ ಸ್ಕೂಟರ್ ಗಳನ್ನು ವಿತರಿಸುವ ಈ ಯೋಜನೆಯನ್ನು ಅಂಗವಿಕಲ ಶ್ರೇಯೋಭಿವೃದ್ಧಿ ಇಲಾಖೆ ರೂಪಿಸುತ್ತಿದೆ.
"ಈ ಯೋಜನೆಯ ಅನುಷ್ಠಾನಕ್ಕೆ ಸಮಿತಿಯೊಂದನ್ನು ರಚಿಸಿದ್ದೇವೆ. ಈ ಸ್ಕೂಟರ್ ಗಳನ್ನು ಕೊಳ್ಳಲು ಟೆಂಡರ್ ಕರೆಯಲಿದ್ದೇವೆ. ಈ ಯೋಜನೆಗೆ ಸರ್ಕಾರ ೬.೨೫ ಕೋಟಿ ಅನುದಾನ ಮೀಸಲಿಟ್ಟಿದ್ದು, ಪ್ರಾರಂಭದಲ್ಲಿ ಈ ವರ್ಷ ೧೦೦೦ ಜನಕ್ಕೆ ಈ ಸ್ಕೂಟರ್ ಗಳನ್ನು ವಿತರಿಸಲಿದ್ದೇವೆ" ಎಂದು ಅಂಗವಿಕಲ ಶ್ರೇಯೋಭಿವೃದ್ಧಿ ಇಲಾಖೆಯ ನಿರ್ದೇಶಕ ಪಿ ಸಿ ಜಯಣ್ಣ ತಿಳಿಸಿದ್ದಾರೆ.
೨೦ ವರ್ಷದಿಂದ ೬೦ ವರ್ಷದೊಳಗಿನ ಅಂಗವಿಕಲರು ಈ ಯೋಜನೆಯ ಪಲಾನುಭವಿಗಳಾಗಲಿದ್ದಾರೆ ಎಂದು ತಿಳಿದು ಬಂದಿದೆ. ಇಲಾಖೆಯ ಮೂಲಗಳ ಪ್ರಕಾರ ದ್ವಿಚಕ್ರ ವಾಹನ ಚಾಲನೆ ಪರವಾನಗಿ ಕಡ್ಡಾಯವಾಗಿದ್ದು, ಎರಡೂ ಕೈಗಳಲ್ಲಿ ಯಾವುದೇ ತೊಂದರೆ ಇಲ್ಲದವರನ್ನು ಮಾತ್ರ ಈ ಯೋಜನೆಗೆ ಪರಿಗಣಿಸಲಾಗುವುದು ಎಂದು ತಿಳಿದು ಬಂದಿದೆ.
ಮುಂದಿನ ಬಜೆಟ್ ನಲ್ಲಿ ಸಿದ್ದರಾಮಯ್ಯನವರು ಈ ಯೋಜನೆಗೆ ಇನ್ನೂ ಹೆಚ್ಚಿನ ಅನುದಾನವನ್ನು ನೀಡಲಾಗುವುದು ಎಂದಿದ್ದಾರೆ ಮುಖ್ಯಮಂತ್ರಿ ಸಿದ್ದರಾಮಯ್ಯ.
Advertisement