
ನವದೆಹಲಿ: ಸುನಂದಾ ಪುಷ್ಕರ್ ಹತ್ಯೆ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿರುವ ದೆಹಲಿ ಪೊಲೀಸರು, ಮಾಜಿ ಕೇಂದ್ರ ಸಚಿವ, ಹಾಲಿ ಕಾಂಗ್ರೆಸ್ ಸಂಸದ ಶಶಿ ತರೂರ್ ಹಾಗೂ ಸುನಂದಾ ಪುಷ್ಕರ್ ದಾಂಪತ್ಯಕ್ಕೆ ಸಂಬಂಧಿಸಿದ ಮಹತ್ವದ ಮಾಹಿತಿಯನ್ನು ಕಲೆ ಹಾಕಿದ್ದಾರೆ.
ಈ ಸಂಬಂಧ ದೆಹಲಿ ಪೊಲೀಸ್ ವಿಶೇಷ ತನಿಖಾ ತಂಡ ಶಶಿ ತರೂರ್ ನಿವಾಸದ ಅಡುಗೆ ಸಿಬ್ಬಂದಿಯನ್ನು ವಿಚಾರಣೆಗೆ ಒಳಪಡಿಸಿದ್ದು, ವಿಚಾರಣೆ ವೇಳೆ ತರೂರ್ ದಂಪತಿಗಳ ನಡುವಿನ ಸಂಬಂಧ ಹದಗೆಟ್ಟಿತ್ತು, ತರೂರ್ ವರ್ತನೆಯನ್ನು ಸುನಂದಾ ಆಕ್ಷೇಪಿಸುತ್ತಿದ್ದರು ಮತ್ತು ಅವರ ವರ್ತನೆಯಿಂದ ತೀವ್ರ ಬೇಸರಗೊಂಡಿದ್ದರು. ಇಬ್ಬರೂ ಜತೆಯಲ್ಲಿ ವಾಸಿಸುತ್ತಿದ್ದರೂ ಹೊಂದಾಣಿ ಇರಲಿಲ್ಲ. ಸುನಂದಾ ಸಾವಿಗೂ ಮುನ್ನ ಹಣಕಾಸು ವಿಚಾರದಲ್ಲಿ ಇಬ್ಬರ ನಡುವೆ ಜಗಳವಾಗಿತ್ತು ಎಂದು ಅಡುಗೆ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.
ಹಿಮಾಚಲ ಪ್ರದೇಶದಲ್ಲಿದ್ದ ತರೂರ್ ಮನೆ ಕೆಲಸದಾತ ನಾರಾಯಣ್ ಸಿಂಗ್‌ರನ್ನು ತನಿಖಾ ತಂಡ ಇಂದು ದೆಹಲಿಗೆ ಕರೆಸಿಕೊಂಡು ವಿಚಾರಣೆ ನಡೆಸಿದ್ದು, ಸುನಂದಾ ಸಾವಿಗೂ ಎರಡು ದಿನ ಮುನ್ನ ಅವರ ಜತೆ ಅಪರಿಚಿತ ವ್ಯಕ್ತಿಯೊಬ್ಬ ಅದೇ ಹೋಟೆಲ್‌ನಲ್ಲಿ ತಂಗಿದ್ದ ಎಂದು ನಾರಾಯಣ್ ಸಿಂಗ್ ಹೇಳಿದ್ದಾನೆ. ಅಲ್ಲದೆ ಅತನ ಹೆಸರು ಸುನೀಲ್ ಸಾಹೆಬ್ ಎಂದು ಸಹ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ ಎನ್ನಲಾಗಿದೆ.
ಇನ್ನು ಈ ಬಗ್ಗೆ ವರದಿಗಾರರಿಗೆ ಪ್ರತಿಕ್ರಿಯಿಸಿರುವ ದೆಹಲಿ ಪೊಲೀಸ್ ಆಯುಕ್ತ ಬಿ.ಎಸ್. ಬಸ್ಸಿ ಅವರು, ಮೂರ್ನಾಲ್ಕು ದಿನಗಳಲ್ಲಿ ಸುದ್ದಿಗೋಷ್ಠಿ ನಡೆಸಿ, ಹತ್ಯೆ ಸಂಬಂಧ ಲಭ್ಯವಾಗಿರುವ ಎಲ್ಲಾ ಮಾಹಿತಿಯನ್ನು ಬಹಿರಂಗ ಪಡಿಸಲಾಗುವುದು ಎಂದು ತಿಳಿಸಿದ್ದಾರೆ.
ಈ ಮಧ್ಯೆ ಅಡುಗೆ ಸಿಬ್ಬಂದಿ ನೀಡಿರುವ ಮಾಹಿತಿಯನ್ನು ಆಧರಿಸಿ, ಸುನೀಲ್ ಸಾಹೆಬ್ ಅವರನ್ನು ದೆಹಲಿ ಪೊಲೀಸರು ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ.
ಕಳೆದ ಜನವರಿ 17ರಂದು ದೆಹಲಿಯ ಪಂಚತಾರಾ ಹೋಟೆಲೊಂದರಲ್ಲಿ 52 ವರ್ಷದ ಸುನಂದಾ ಶಂಕಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದರು. ದೆಹಲಿಯ ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್) ಡಿ.29ರಂದು ನೀಡಿರುವ ಅಂತಿಮ ವೈದ್ಯಕೀಯ ವರದಿ 'ಸುನಂದಾ ವಿಷ ಪ್ರಾಶನದಿಂದ ಸಾವನ್ನಪ್ಪಿದ್ದು ಅಸಹಜ ಸಾವು' ಎಂದು ಹೇಳಿತ್ತು.
Advertisement