
ಮೈಸೂರು: ನಾಲ್ಕು ಮುಖಗಳಿರುವ ನಂದಿಯ ಶಿಲ್ಪವು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕು ನಾಯಕನಹಟ್ಟಿ ಹೋಬಳಿಯ ಗೌರಿಪುರದ ಉಮಾಮಹೇಶ್ವರ ದೇವಾಲಯದಲ್ಲಿ ಪತ್ತೆಯಾಗಿದೆ.
ಗೌರಿಶಂಕರ, ಉಮಾಮಹೇಶ್ವರ ದೇವಾಲಯವೆಂದು ಕರೆಯುತ್ತಿರುವ ಈ ದೇವಾಲಯವು ಗರ್ಭ ಗುಡಿ, ಸುಕನಾಸಿ, ನವರಂಗ ಹಾಗೂ ಮುಖಮಂಟಪಗಳಿಂದ ನಿರ್ಮಾಣಗೊಂಡಿದೆ. ರಾಮ, ಲಕ್ಷಣ, ಸೀತೆ, ಸರಸ್ವತಿ, ದುರ್ಗಿ, ನರಸಿಂಹ, ಆಂಜನೇಯ, ಷಣ್ಮುಖ, ಗಂಡಭೇರುಂಡ, ಗಣೇಶ, ಬೇಡರಕಣ್ಣಪ್ಪ, ಭೈರವ, ವೀರಭದ್ರ ಇನ್ನಿತರ ಶಿಲ್ಪಗಳು ಈ ದೇವಾಲಯದಲ್ಲಿರುವ ನಾಲ್ಕು ಕಂಬಗಳ ಮೇಲಿದೆ.
ಒಂದು ದೇಹ ಹಾಗೂ ನಾಲ್ಕು ಮುಖವುಳ್ಳ ನಂದಿಯ ಈ ಶಿಲ್ಪದ ಕಾಲಮಾನವು 14-15ನೇ ಶತಮಾನವಾಗಿದ್ದು, ಲೌಕಿಕ ಜೀವನದಿಂದ ಅಲೌಕಿಕ ಜೀವನದೆಡೆಗೆ ಸಾಗಬೇಕಾದ ಅಥವಾ ಕೆಳಮುಖದಿಂದ ಮೇಲ್ಮುಖದ ಕಡೆಗೆ ಚಲಿಸಬೇಕಾದ ಜೀವನ ಧರ್ಮದ ನಾಲ್ಕು ಹಂತಗಳನ್ನು ಈ ನಾಲ್ಕು ಮುಖಗಳು ಸಂಕೇತಿಸುತ್ತವೆ ಎಂದು ಈ ಶಿಲ್ಪವನ್ನು ಶೋಧಿಸಿರುವ ಮೈಸೂರು ಕುವೆಂಪುನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಡಾ. ಎಸ್. ಜಿ ರಾಮದಾಸ ರೆಡ್ಡಿ ತಿಳಿಸಿದ್ದಾರೆ.
ಇದೇ ತರಹದ ಮೂರು ಮುಖಗಳ ಶಿಲ್ಪವು ಹರಪ್ಪಾ, ಮೊಹೆಂಜೋದಾರೋ ಭೂ ಉತ್ಖನನಗಳಲ್ಲಿ ಪತ್ತೆಯಾಗಿದ್ದು, ಇದು ಕ್ರಿ.ಪೂ 2600 ರಿಂದ 1900ರ ಕಾಲಮಾನಕ್ಕೆ ಸೇರಿದ್ದು ಎಂದು ಪುರಾತತ್ವ ಶಾಸ್ತ್ರಜ್ಞರು ಉಲ್ಲೇಖಿಸಿದ್ದಾರೆ.
Advertisement