ಆಪ್ ಮಾಜಿ ನಾಯಕಿ ಶಾಜಿಯಾ ಇಲ್ಮಿ ಬಿಜೆಪಿ ಸೇರ್ಪಡೆ

ಆಮ್ ಆದ್ಮಿ ಪಕ್ಷದ ಸಂಸ್ಥಾಪಕ ಸದಸ್ಯೆಯಾಗಿದ್ದ ಶಾಜಿಯಾ ಇಲ್ಮಿ ಅವರು ಶುಕ್ರವಾರ ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾಗಿದ್ದಾರೆ.
ಶಾಜಿಯಾ ಇಲ್ಮಿ
ಶಾಜಿಯಾ ಇಲ್ಮಿ

ನವದೆಹಲಿ: ದೆಹಲಿ ವಿಧಾನಸಭೆ ಚುನಾವಣೆ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಆಮ್ ಆದ್ಮಿ ಪಕ್ಷದ ಸಂಸ್ಥಾಪಕ ಸದಸ್ಯೆಯಾಗಿದ್ದ ಶಾಜಿಯಾ ಇಲ್ಮಿ ಅವರು ಶುಕ್ರವಾರ ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾಗಿದ್ದಾರೆ. ನಿನ್ನೆಯಷ್ಟೇ ನಿವೃತ್ತ ಐಪಿಎಸ್ ಅಧಿಕಾರಿ ಕಿರಣ್ ಬೇಡಿ ಅವರು ಬಿಜೆಪಿ ಸೇರಿದ್ದರು.

ನವದೆಹಲಿಯಲ್ಲಿರುವ ಬಿಜೆಪಿ ಪ್ರಧಾನ ಕಚೇರಿಯಲ್ಲಿ ದೆಹಲಿ ಬಿಜೆಪಿ ಘಟಕದ ಅಧ್ಯಕ್ಷ ಸತೀಶ್ ಉಪಾಧ್ಯಯ ಅವರ ಸಮ್ಮುಖದಲ್ಲಿ ಇಲ್ಮಿ ಇಂದು ಬಿಜೆಪಿಗೆ ಸೇರ್ಪಡೆಗೊಂಡರು. ಇದಕ್ಕು ಮುನ್ನ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿದ್ದ ಶಾಜಿಯಾ ಇಲ್ಮಿ, ತಾನು ಬಿಜೆಪಿ ಸೇರುತ್ತಿರುವುದನ್ನು ಖಚಿತ ಪಡಿಸಿದ್ದರು.


ಬಿಜೆಪಿ ಸೇರಿದ ಬಳಿಕ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಶಾಜಿಯಾ ಇಲ್ಮಿ ಜನ ಮತ್ತು ದೇಶ ಸೇವೆ ಮಾಡಲು ಇದೊಂದು ಉತ್ತಮ ಅವಕಾಶ ಎಂದು ಹೇಳಿದರು. ಅಲ್ಲದೆ ಪ್ರಧಾನಿ ನರೇಂದ್ರ ಮೋದಿ ಅವರ ಅಭಿವೃದ್ಧಿ ಕಾರ್ಯಗಳಿಂದ ಪ್ರೇರಿತಳಾಗಿ ತಾನು ಬಿಜೆಪಿ ಸೇರಿರುವುದಾಗಿ ತಿಳಿಸಿದರು. 

ಇಲ್ಮಿ ಕಳೆದ ಲೋಕಸಭಾ ಚುನಾವಣೆಯಲ್ಲಿ ಗಾಜಿಯಾಬಾದ್ ಲೋಕಸಭಾ ಕ್ಷೇತ್ರದಲ್ಲಿ ಆಪ್ ಅಭ್ಯರ್ಥಿಯಾಗಿ ಮಾಜಿ ಸೇನಾ ಮುಖ್ಯಸ್ಥ ಜನರಲ್ ವಿ.ಕೆ.ಸಿಂಗ್ ಅವರ ವಿರುದ್ಧ ಸ್ಪರ್ಧಿಸಿ ಸೋಲು ಅನುಭವಿಸಿದ್ದರು. ಬಳಿಕ ಎಎಪಿ ಕೆಲವೊಂದು ತಪ್ಪುಗಳನ್ನು ಮಾಡಿದೆ ಎಂದು ಆರೋಪಿಸಿ ಕಳೆದ ಮೇ 24 ರಂದು ಆಮ್ ಆದ್ಮಿ ಪಕ್ಷಕ್ಕೆ ರಾಜಿನಾಮೆ ನೀಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com