
ಚೆನ್ನೈ: 'ಮಾಧುರುಬಾಗನ್ ' (ಅರ್ಧನಾರೀಶ್ವರ) ಕಾದಂಬರಿ ವಿವಾದದಲ್ಲಿ ಪೆರುಮಾಳ್ ಮುರುಗನ್ ಪರವಾಗಿ ನಿಂತಿರುವ ತಮಿಳುನಾಡು ಪ್ರಗತಿಪರ ಬರಹಗಾರರ ಮತ್ತು ಕಲಾವಿದರ ಸಂಘ ಈಗ ಮದ್ರಾಸ್ ಉಚ್ಛ ನ್ಯಾಯಾಲಯದ ಮೆಟ್ಟಿಲೇರಿದೆ. ನಾಮಕ್ಕಾಲ್ ಜಿಲ್ಲಾಡಳಿತ ಏರ್ಪಡಿಸಿದ್ದ ಶಾಂತಿ ಸಮಿತಿ ಸಭೆ ಸಂವಿಧಾನಕ್ಕೆ ವಿರುದ್ಧವಾಗಿರುವುದರಿಂದ, ಪೆರುಮಾಳ್ ಮುರುಗನ್ ನೀಡಿರುವ ತಪ್ಪೊಪ್ಪಿಗೆಯನ್ನು ವಜಾ ಮಾಡಬೇಕು ಎಂದು ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದೆ.
ಮಾಧುರುಬಾಗನ್ ಕಾದಂಬರಿಯನ್ನು ವಿರೋಧಿಸಿದ್ದ ಕೆಲವು ಜಾತಿ ಸಂಘಟನೆಗಳು ಮತ್ತು ಹಿಂದೂ ಸಂಘಟನೆಗಳು ತಿರುಚೆನ್ ಗೋಡ್ ಜಿಲ್ಲೆಯಲ್ಲಿ ದಾಂಧಲೆ ಎಬ್ಬಿಸಿದ್ದರು. ಇದರಿಂದ ತೀವ್ರ ಬೇಸರಕ್ಕೆ ಒಳಗಾಗಿದ್ದ ಪೆರುಮಾಳ್ ಮುರುಗನ್ ಜಿಲ್ಲಾಡಳಿತ ನಡೆಸಿದ ಸಭೆಯಲ್ಲಿ ಜನವರಿ ೧೨ ರಂದು 'ಬೇಷರತ್ ಕ್ಷಮೆ' ಯಾಚಿಸಿದ್ದರು.
ಈಗ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ತಮಿಳುನಾಡಿನ ಪ್ರಗತಿಪರ ಬರಹಗಾರರ ಮತ್ತು ಕಲಾವಿದರ ಸಂಘದ ಅಧ್ಯಕ್ಷ ಎಸ್ ತಮಿಳ್ ಸೆಲ್ವನ್, ಈ ಶಾಂತಿ ಸಭೆಯ ತಪ್ಪೊಪ್ಪಿಗೆ ಸಂವಿಧಾನದ ೧೯(೧)(ಎ) ವಿಧಿಯನ್ನು ಉಲ್ಲಂಘಿಸಿರುವುದರಿಂದ ಅದನ್ನು ವಜಾಗೊಳಿಸುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.
ಸ್ವಾತಂತ್ರ ಪೂರ್ವ ಕಾಲಘಟ್ಟದ ಕಾಲದ ಈ ಕಾದಂಬರಿಯಲ್ಲಿ ತಿರುಚೆನ್ ಗೋಡಿನ ಅರ್ಧನಾರೀಶ್ವರ ದೇವಾಲಯದಲ್ಲಿ ನಡೆಯುವ ಒಂದು ಆಚರಣೆಯನ್ನು ಈ ಕಾದಂಬರಿಯಲ್ಲಿ ಬಿಂಬಿಸಲಾಗಿತ್ತು. ಮಕ್ಕಳಿಲ್ಲದ ನಾರಿಯರು ಮಕ್ಕಳು ಪಡೆಯಲು ತಮ್ಮ ಇಚ್ಛೆಯ ಪುರುಷನ ಜೊತೆ ಸಂಭೋಗ ನಡೆಸುವ ಆಚರಣೆ ಇದಾಗಿತ್ತು.
ಇದರಿಂದ ಕುಪಿತಗೊಂಡಿದ್ದ ಕೆಲವು ಹಿಂದೂ ಸಂಘಟನೆಗಳು ಮತ್ತು ಮೇಲ್ಜಾತಿಯ ಕೆಲವು ಜಾತಿ ಸಂಘಟನೆಗಳು ಹಿಂದು ಧರ್ಮದ ಮಹಿಳೆಯರನ್ನು ಕೆಟ್ಟದಾಗಿ ಚಿತ್ರಿಸಿದ್ದಾರೆ ಎಂದು ದೂರಿ ಪ್ರತಿಭಟನೆ ನಡೆಸಿ ಕಾದಂಬರಿಯನ್ನು ಸುಟ್ಟಿದ್ದರು ಹಾಗೂ ಲೇಖಕನನ್ನು ಬೆದರಿಸಿ ಅವರಿಂದ ಕ್ಷಮಾಪಣೆ ಪಡೆದಿದ್ದರು. ಈ ನಡೆ ರಾಷ್ಟ್ರಾದ್ಯಂತ ಪ್ರಗತಿಪರ ಲೇಖಕರು ಮತ್ತು ಚಿಂತಕರನ್ನು ಕುಪಿತಗೊಳಿಸಿತ್ತು. ಇತ್ತೀಚಿಗೆ ನಡೆದ ಹಲವು ಸಾಹಿತ್ಯ ಸಮಾವೇಶಗಳಲ್ಲಿ ಹಲವು ಲೇಖಕರು ಕಾದಂಬರಿಯ ಭಾಗಗಳನ್ನು ಸಾರ್ವಜನಿಕವಾಗಿ ಓದಿ ಲೇಖಕರಿಗೆ ತಮ್ಮ ಬೆಂಬಲ ಸೂಚಿಸಿದ್ದರು.
Advertisement