
ಪೇಶಾವರ: ತಾಲಿಬಾನ್ ಉಗ್ರಗಾಮಿಗಳು ಡಿಸೆಂಬರ್ ನಲ್ಲಿ ಪೇಶಾವರದ ಸೇನಾ ಶಾಲೆಯಲ್ಲಿ ನಡೆಸಿದ ದಾಳಿಯಲ್ಲಿ ೧೩೨ ಮಕ್ಕಳು ಸೇರಿದಂತೆ ೧೫೦ ಜನರು ಮೃತಪಟ್ಟಿದ್ದರು. ಮುನ್ನೆಚ್ಚರಿಕೆಯ ಕ್ರಮದಂತೆ ಇನ್ನು ಮುಂದೆ ಪಾಕಿಸ್ತಾನದ ಪೇಶಾವರ ಉಪಾಧ್ಯಾಯರಿಗೆ ಬಂದೂಕು ತರಬೇತಿ ನೀಡಲಾಗುತ್ತಿದ್ದು, ಭದ್ರತೆಗೋಸ್ಕರ ಇನ್ನು ಮುಂದೆ ಅವರು ತರಗತಿಗಳಿಗೆ ಬಂದೂಕನ್ನು ತೆಗೆದುಕೊಂದು ಹೋಗಬಹುದಾಗಿದೆ.
"ಶಸ್ತ್ರಾಸ್ತ್ರಗಳನ್ನು ತರಗತಿಗಳಿಗೆ ತೆಗೆದುಕೊಂಡು ಹೋಗುವುದು ಕಡಾಯವಲ್ಲ. ಆದರೆ ಅವುಗಳನ್ನು ಭದ್ರತೆಗಾಗಿ ಕೊಂಡೊಯ್ಯಲು ಇಚ್ಛಿಸುವವರಿಗೆ ಅಗತ್ಯ ಪರವಾನಗಿ ನೀಡಲಾಗುವುದು" ಎಂದು ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
"೩೫ ಸಾವಿರ ಶಾಲೆಗಳು, ಕಾಲೇಜುಗಳು ಮತ್ತು ವಿಶ್ವವಿದ್ಯಾಲಯಗಳನ್ನು ರಕ್ಷಿಸಲು ಈಗ ಇರುವ ಪೋಲಿಸ್ ಪಡೆಯ ಸಂಖ್ಯೆ ಅಗತ್ಯದಷ್ಟು ಇಲ್ಲವಾದ್ದರಿಂದ, ಮೇಷ್ಟ್ರುಗಳಿಗೆ ಬಂದೂಕುಗಳನ್ನು ಕೊಂಡೊಯ್ಯಲು ಅವಕಾಶ ನೀಡುತ್ತಿದ್ದೇವೆ" ಎಂದು ತಿಳಿಸಿದ್ದಾರೆ.
ಸರ್ಕಾರದ ಈ ನಡೆಗೆ ಹಲವು ಮೂಲಗಳಿಂದ ವಿರೋಧವೂ ಕೇಳಿಬಂದಿದೆ. ಒಂದು ಕೈನಲ್ಲಿ ಪೆನ್ ಹಿಡಿದು ಒಂದು ಕೈನಲ್ಲಿ ಬಂದೂಕು ಹಿಡಿದು ಪಾಠ ಮಾಡಲು ಸಾಧ್ಯವೇ ಎಂಬ ಪ್ರಶ್ನೆಗಳು ಕೇಳಿಬರುತ್ತಿವೆ.
Advertisement