ದುರ್ಬಲ ಕಾಂಗ್ರೆಸ್‌ನಿಂದ ಮೋದಿ ತಡೆಯಲು ಸಾಧ್ಯವಿಲ್ಲ: ಭಾರದ್ವಾಜ್

ದುರ್ಬಲ ಕಾಂಗ್ರೆಸ್‌ನಿಂದ ಪ್ರಧಾನಿ ನರೇಂದ್ರ ಮೋದಿ ಅವರನ್ನು ತಡೆಯಲು ಸಾಧ್ಯವಿಲ್ಲ ಎಂದು ಕರ್ನಾಟಕದ ಮಾಜಿ ರಾಜ್ಯಪಾಲ ಹಾಗೂ ಹಿರಿಯ ಕಾಂಗ್ರೆಸ್ ಮುಖಂಡ...
ಹಂಸರಾಜ್ ಭಾರದ್ವಾಜ್
ಹಂಸರಾಜ್ ಭಾರದ್ವಾಜ್

ನವದೆಹಲಿ: ದುರ್ಬಲ ಕಾಂಗ್ರೆಸ್‌ನಿಂದ ಪ್ರಧಾನಿ ನರೇಂದ್ರ ಮೋದಿ ಅವರನ್ನು ತಡೆಯಲು ಸಾಧ್ಯವಿಲ್ಲ ಎಂದು ಕರ್ನಾಟಕದ ಮಾಜಿ ರಾಜ್ಯಪಾಲ ಹಾಗೂ ಹಿರಿಯ ಕಾಂಗ್ರೆಸ್ ಮುಖಂಡ ಹಂಸರಾಜ್ ಭಾರದ್ವಾಜ್ ಅವರು ಹೇಳಿದ್ದಾರೆ.

ಕಾಂಗ್ರೆಸ್ ಪಕ್ಷದ ದುರ್ಬಲವಾದ ಈ ಪರಿಸ್ಥಿತಿಯಲ್ಲಿ ಮೋದಿ ಜನಪ್ರಿಯತೆಯನ್ನು ತಡೆದು ನಿಲ್ಲಿಸುವ ಶಕ್ತಿ ಇಲ್ಲ. ಈ ಸಂದರ್ಭದಲ್ಲಿ ಯುವ ನಾಯಕ ರಾಹುಲ್ ಗಾಂಧಿ ಕೂಡ ಔಟ್ ಆಫ್ ಟಚ್ ಆಗಿದ್ದಾರೆ ಎಂದು ಇಂಡಿಯನ್ ಎಕ್ಸ್ ಪ್ರೆಸ್ ಗೆ ನೀಡಿದ ಸಂದರ್ಶನದಲ್ಲಿ ಭಾರದ್ವಾಜ್ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಐಪಿಎಲ್ ಹಗರಣದ ಆರೋಪಿ ಲಲಿತ್ ಮೋದಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹಾಗೂ ರಾಜಸ್ಥಾನ್ ಮುಖ್ಯಮಂತ್ರಿ ವಸುಂಧರಾ ರಾಜೇ ಅವರ ವಿರುದ್ಧ ಕ್ರಮ ಕೈಗೊಳ್ಳದ ಕೇಂದ್ರ ಸರ್ಕಾರಕ್ಕೆ ಸಂಸತ್ ಅಧಿವೇಶನ ನಡೆಸಲು ಬಿಡಲ್ಲ ಎಂಬ ಕಾಂಗ್ರೆಸ್ ಪಕ್ಷದ ಬೆದರಿಕೆ ಬಗ್ಗೆ ಪ್ರತಿಕ್ರಿಯಿಸಿರುವ ಭಾರದ್ವಾಜ್, ಇದು ಉತ್ತಮ ನಿರ್ಧಾರ ಅಂತ ಅನ್ನಿಸುವುದಿಲ್ಲ. ಯಾರೇ ಯಾವುದೇ ಕಾನೂನನ್ನು ಉಲ್ಲಂಘಿಸಿದರು, ಅದಕ್ಕೆ ಕಾನೂನಿದೆ. ಅದನ್ನು ಅನುಸರಿಸಬೇಕು. ಆದರೆ ಸಂಸತ್ ಕಲಾಪಕ್ಕೆ ಅಡ್ಡಿಪಡಿಸುತ್ತೇವೆ ಎಂಬುದು ಒಳ್ಳೆಯ ಸಂಸದೀಯ ನಡವಳಿಕೆ ಅಲ್ಲ ಎಂದಿದ್ದಾರೆ.

ಪ್ರಮುಖ ವಿಷಯಗಳನ್ನು ಚರ್ಚಿಸಲು ಸಂಸತ್ ಉತ್ತಮವಾದ ಸ್ಥಳ. ಅಲ್ಲಿ ಮೋದಿ, ಸ್ವರಾಜ್, ರಾಜೇ ಬಗ್ಗೆಯೂ ಚರ್ಚಿಸಬೇಕು. ಈ ವಿಷಯವನ್ನು ಸಂಸತ್ ನಲ್ಲಿ ಚರ್ಚಿಸುವ ಮೂಲಕ ಕಾಂಗ್ರೆಸ್ ತನ್ನ ಬೌದ್ಧಿಕ ಚಾತುರ್ಯವನ್ನು ಪ್ರದರ್ಶಿಸಬೇಕು ಎಂದು ಭಾರದ್ವಾಜ್ ಸಲಹೆ ನೀಡಿದ್ದಾರೆ.

ಸದ್ಯದ ಪರಿಸ್ಥಿತಿಯಲ್ಲಿ ಮೋದಿ ವಿರುದ್ಧ ಹೋರಾಡುವ ಸಾಮರ್ಥ್ಯ ಕಾಂಗ್ರೆಸ್ ಪಕ್ಷಕ್ಕೆ ಇದೆಯೇ? ಎಂಬ ಪ್ರಶ್ನೆಗೆ ಉತ್ತರಿಸಿ ಅವರು, ದುರ್ಬಲವಾಗಿರುವ ಕಾಂಗ್ರೆಸ್ ಪಕ್ಷಕ್ಕೆ ಪವರ್ ಫುಲ್ ಪ್ರಚಾರಕಾರ್ಯ ನಡೆಸುತ್ತಿರುವ ಮೋದಿಯನ್ನು ಹಣಿಯಲು ಸಾಧ್ಯವಿಲ್ಲ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com