
ಬೆಂಗಳೂರು: ಲೋಕಾಯುಕ್ತ ಸಂಸ್ಥೆಯಲ್ಲಿ ನಡೆದಿರುವ ಭ್ರಷ್ಟಾಚಾರದ ಬಗ್ಗೆ ವ್ಯಾಪಕ ಚರ್ಚೆಗಳು ನಡೆದಿರುವುದರ ನಡುವೆಯೇ ಈಗ ಲೋಕಾಯುಕ್ತ ನ್ಯಾ. ಭಾಸ್ಕರ್ ರಾವ್ ನೇಮಕದಲ್ಲೂ ಭ್ರಷ್ಟಾಚಾರ ನಡೆದಿದೆ ಎಂಬ ಶಂಕೆಗಳು ನಿಧಾವವಾಗಿ ಹೊರಬರುತ್ತಿವೆ. ಈ ಹೊಸ ಬೆಳವಣಿಗೆಗಳು ಆಡಳಿತ ಹಾಗೂ ವಿಪಕ್ಷಗಳಿಗೆ ಮುಜುಗರ ತರುವಂತಿವೆ.
ಬೆಂಗಳೂರು ವಕೀಲರ ಸಂಘದ ಮಾಜಿ ಅಧ್ಯಕ್ಷ ಕೆ.ಎನ್. ಸುಬ್ಬಾರೆಡ್ಡಿ ಅವರು ಬುಧವಾರ ಹೇಳಿಕೆಯೊಂದನ್ನು ನೀಡಿ ನ್ಯಾಯ ಮೂರ್ತಿ ಭಾಸ್ಕರ್‍ರಾವ್ ನೇಮಕ ರು.10 ಕೋಟಿ ಡೀಲ್ ಎಂದು ಆರೋಪಿಸಿದ್ದರು. ಗುರುವಾರ ಅದರ ಮುಂದುವರಿದ ಭಾಗವಾಗಿ ಆಪ್ ಪಕ್ಷದ ಮುಖಂಡ ರವಿಕೃಷ್ಣಾರೆಡ್ಡಿ ಅವರು ಭಾಸ್ಕರ್ ರಾವ್ ನೇಮಕಕ್ಕೆ ಆಗಿನ ಮುಖ್ಯಮಂತ್ರಿಗಳು ಒಳಗೊಂಡಂತೆ ಜವಾಬ್ದಾರಿ ಸ್ಥಾನದಲ್ಲಿರುವ ನಾಲ್ವರು ಹೊಣೆ ಎಂದು ಆರೋಪಿಸಿದ್ದಾರೆ.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರೆಡ್ಡಿ ಅವರು, ಲೋಕಾಯುಕ್ತರ ನೇಮಕದ ವೇಳೆ ಜಗದೀಶ್ ಶೆಟ್ಟರ್ ಮುಖ್ಯಮಂತ್ರಿ, ಪ್ರತಿಪಕ್ಷದ ನಾಯಕರಾಗಿ ಸಿದ್ದರಾಮಯ್ಯ ಹಾಗೂ ರಾಜ್ಯಪಾಲರಾಗಿ ಎಚ್.ಆರ್.ಭಾರದ್ವಾಜ್ ಇದ್ದರು. ಹಾಗಾದರೆ ಈ ನೇಮಕದಲ್ಲಿ ರು.10 ಕೋಟಿ ಹಣ ಹೇಗೆ ಹಂಚಿಕೆಯಾಯಿತು ಎಂಬುದನ್ನು ಎಲ್ಲರೂ ಸ್ಪಷ್ಠಪಡಿಸಬೇಕೆಂದು ಒತ್ತಾಯಿಸಿದರು.
ರಿಯಾಜ್ ಮೇಲಿನ ಆರೋಪ?: ಲೋಕಾಯುಕ್ತ ಸಂಸ್ಥೆಯಲ್ಲಿ ಪೊಲೀಸ್ ಇನ್ಸ್ ಪೆಕ್ಟರ್ ಆಗಿ ನೇಮಕಗೊಂಡಿದ್ದ ರಿಯಾಜ್ ಅಹಮದ್ 15 ರಿಂದ 20 ವರ್ಷ ಅಲ್ಲೇ ಕಾರ್ಯನಿರ್ವಹಿಸಿದ್ದಾರೆ.
ಸದ್ಯ ಅವರು ಜಂಟಿ ಆಯುಕ್ತರಾಗಿದ್ದು ಇಷ್ಟು ಸುದೀರ್ಘ ಅವಧಿ ಒಂದೇ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸಲು ಹೇಗೆ ಸಾಧ್ಯವಾಯಿತು ಎಂದು ಪ್ರಶ್ನಿಸಿದರು. ರಿಯಾಜ್ ಅವರು ಸಂಸದ ಡಿ.ಕೆ. ಸುರೇಶ್ ಅವರನ್ನು ಭೇಟಿಯಾಗಿದ್ದರು ಎನ್ನಲಾಗಿದೆ. ಏಕೆ ಭೇಟಿಯಾಗಿದ್ದರು? ಇಂಧನ ಸಚಿವ ಡಿ.ಕೆ.ಶಿವಕುಮಾರ್ ಹಾಗೂ ಸಂಸದ ಡಿ.ಕೆ.ಸುರೇಶ್ ಮೇಲೆ ಹಲವು ಪ್ರಕರಣಗಳು ಲೋಕಾಯುಕ್ತದಲ್ಲಿವೆ. ಆದ್ದರಿಂದ ಅವರೊಂದಿಗಿನ ರಿಯಾಜ್ ಭೇಟಿ ಮಹತ್ವ ಪಡೆದು ಕೊಳ್ಳುತ್ತದೆ ಎಂದು ಪ್ರತಿಪಾದಿಸಿದರು.
ಇದರೊಂದಿಗೆ ರಿಯಾಜ್ ಅವರು ಆರ್.ಟಿ. ನಗರದಲ್ಲಿರುವ
ಪ್ರಭಾವಿ ಮಂತ್ರಿ (ಲೋಕಾಯುಕ್ತದಲ್ಲಿ ಮೊಕದ್ದಮೆಯಿರುವ)ಯೊಬ್ಬರ ಪುತ್ರನನ್ನು ಭೇಟಿಯಾಗಿದ್ದಾರೆ. ದಿನೇಶ್ ಗುಂಡೂರಾವ್, ಡಿ.ಕೆ.ಶಿವಕುಮಾರ್, ಮಹದೇವ್ ಪ್ರಸಾದ್, ದೇಶಪಾಂಡೆ ಅವರ ಮೇಲೆ ಲೋಕಾಯುಕ್ತದಲ್ಲಿ ಮೊಕದ್ದಮೆಗಳಿವೆ. ಇವರಲ್ಲಿ ಯಾರ ಮಗನನ್ನು ಭೇಟಿಯಾಗಿದ್ದರೆಂದು ಸ್ಪಷ್ಟಪಡಿಸಬೇಕಾಗಿದೆ.
ವಿಶೇಷ ತನಿಖಾ ತಂಡ ನೇಮಕಕ್ಕೆ ಸರ್ಕಾರಕ್ಕೆ ಅವಕಾಶವಿಲ್ಲ, ಹಗರಣ ಮುಚ್ಚಿ ಹಾಕಲು ಈ ಪ್ರಹಸನ ನಡೆದಿದೆ. ಕಾರಾಗೃಹ ಇಲಾಖೆಯ ಎಡಿಜಿಪಿ ಕಮಲ್ ಪಂಥ್ ಇನ್ನು ಕೆಲವೇ ದಿನಗಳಲ್ಲಿ ವಿದೇಶ ಪ್ರವಾಸಕ್ಕೆ ತೆರಳುತ್ತಿದ್ದು, ಅವರನ್ನೇ ಈ ಪ್ರಕರಣದ ತನಿಖೆಗೆ ಏಕೆ ನೇಮಿಸಿದ್ದಾರೆ? ತನಿಖೆ ವಿಳಂಬಗೊಳಿಸಲೆಂದೇ ಸರ್ಕಾರ ಈ ಕ್ರಮ ಕೈಗೊಂಡಿದೆ ಎಂದು ಆರೋಪಿಸಿದರು.
ಲೋಕಾಯುಕ್ತ ಎಸ್ಪಿ ಸೋನಿಯಾ ನಾರಂಗ್ ತನಿಖೆಗೆ ತಡೆ ಹಾಕುವ ನಿಟ್ಟಿನಲ್ಲಿ ಲೋಕಾಯುಕ್ತರ ಪುತ್ರ ಅಶ್ವಿನ್‍ರಾವ್ ಹೈಕೋರ್ಟ್‍ನಲ್ಲಿ ಅರ್ಜಿ ಸಲ್ಲಿಸಿದ್ದರು. ಅಕ್ರಮ ಮುಚ್ಚಲು ಭಾಸ್ಕರ್ ರಾವ್ ಕಂಕಣಬದ್ಧರಾಗಿ ನಿಂತಿದ್ದಾರೆ. ಲೋಕಾ ಹಗರಣಕ್ಕೆ ಸಂಬಂಧಿಸಿದಂತೆ ಆಪ್ ದೂರು ನೀಡಿದ್ದರೂ ನಗರ ಪೊಲೀಸ್ ಆಯುಕ್ತ ಎಫ್ಐಆರ್ ದಾಖಲಿಸಲು ತಡೆಯೊಡ್ಡಿದ್ದಾರೆ ರವಿಕೃಷ್ಣಾ ರೆಡ್ಡಿ ಎಂದು ಹೇಳಿದರು.
Advertisement