ಬಿಬಿಎಂಪಿ ಚುನಾವಣೆಗೆ 8 ವಾರ ಕಾಲಾವಕಾಶ ನೀಡಿದ ಸುಪ್ರೀಂ ಕೋರ್ಟ್

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಚುನಾವಣೆಗೆ ಸುಪ್ರೀಂ ಕೋರ್ಟ್ 8 ವಾರಗಳ ಕಾಲಾವಕಾಶ ನೀಡಿದೆ. ಬಿಬಿಎಂಪಿ ಚುನಾವಣೆಯನ್ನು ಹೇಗಾದರೂ ಸರಿ...
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್

ನವದೆಹಲಿ: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಚುನಾವಣೆಗೆ ಸುಪ್ರೀಂ ಕೋರ್ಟ್ 8 ವಾರಗಳ ಕಾಲಾವಕಾಶ ನೀಡಿದೆ.

ಬಿಬಿಎಂಪಿ ಚುನಾವಣೆಯನ್ನು ಹೇಗಾದರೂ ಸರಿ ಮುಂದೂಡಲೇಬೇಕೆಂಬ ಹಠಕ್ಕೆ ಬಿದ್ದು ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎಚ್.ಎಲ್.ದತ್ತು ನೇತೃತ್ವದ ಪೀಠ, ಚುನಾವಣೆಗೆ 8 ವಾರಗಳ ಕಾಲಾವಕಾಶ ನೀಡಿದೆ. ಆದರೆ ಕ್ಷೇತ್ರ ಪುನರ್ ವಿಂಗಡಣೆಯಾಗಲಿ, ಹೊಸ ಮೀಸಲಾತಿಗೆ ಅವಕಾಶ ಇಲ್ಲ ಎಂದು ಸ್ಪಷ್ಟಪಡಿಸಿದೆ. ಅಲ್ಲದೆ ಹಳೇ ಮೀಸಲಾತಿ ಅನ್ವಯ ಅಕ್ಟೋಬರ್ 5ರೊಳಗೆ ಚುನಾವಣೆ ನಡೆಸುವಂತೆ ಸೂಚಿಸಿದೆ.

ಪ್ರಸ್ತುತ 2001ರ ಜನಗಣತಿ ಪ್ರಕಾರ ಮೀಸಲು ನಿಗದಿ ಮಾಡಲಾಗಿದೆ. ಆದರೆ 2011ರ ಜನಗಣತಿಯಂತೆ ಮೀಸಲು ನಿಗದಿ ಮಾಡಿ ಚುನಾವಣೆ ನಡೆಸಲು ಕಾಲಾವಕಾಶ ನೀಡಬೇಕು ಎಂದು ಕೋರಿ ರಾಜ್ಯ ಸರ್ಕಾರ ಸೋಮವಾರ ಮೇಲ್ಮನವಿ ಸಲ್ಲಿಸಿತ್ತು.

ಮೇ 5 ರಂದು ಸ್ವತಃ ಸುಪ್ರೀಂಕೋರ್ಟ್ ಮೂರು ತಿಂಗಳ ಒಳಗಾಗಿ ಚುನಾವಣೆ ನಡೆಸುವಂತೆ ರಾಜ್ಯ ಸರ್ಕಾರಕ್ಕೆ ಆದೇಶ ನೀಡಿತ್ತು. ಆ ಆದೇಶದಂತೆ ರಾಜ್ಯ ಚುನಾವಣಾ ಆಯೋಗ 2001ರ ಜನಗಣತಿ ಆಧಾರದ ಮೇಲೆ ಚುನಾವಣೆ ನಡೆಸಲು ಮುಂದಾಗಿತ್ತು. ಆದರೆ  2011ನೇ ಸಾಲಿನ ಜನಗಣತಿ ಆಧಾರದ ಮೇಲೆ ಮೀಸಲಾತಿ ನಿಗದಿ ಮಾಡದೇ ಇದ್ದರೆ ಎಸ್‍ಸಿ, ಎಸ್‍ಟಿ ಜನಾಂಗಕ್ಕೆ ಪ್ರಾತಿನಿಧ್ಯ ಕಡಮೆಯಾಗಲಿದ್ದು, ಆ ಸಮುದಾಯಕ್ಕೆ ಸಿಗಬೇಕಾದ ಸಾಮಾಜಿಕ ನ್ಯಾಯ ದಕ್ಕುವುದಿಲ್ಲ ಎಂದು ಸರ್ಕಾರ ಮತ್ತೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು.

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ರಾಜ್ಯ ಚುನಾವಣಾ ಆಯುಕ್ತ ಪಿ.ಎನ್. ಶ್ರೀನಿವಾಸಾಚಾರಿ ಅವರು, ಯಾವ ದಿನಾಂಕದಿಂದ 8 ವಾರ ಎಂದು ಗೊತ್ತಾಗಿಲ್ಲ. ಆದೇಶದ ಪ್ರತಿ ಕೈಸೇರಿದ ಬಳಿಕವಷ್ಟೇ ಮುಂದಿನ ತೀರ್ಮಾನ ತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com