
ಬೆಂಗಳೂರು: ಲೋಕಾಯುಕ್ತ ಸಂಸ್ಥೆಯಲ್ಲಿ ನಡೆದಿರುವ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ವರದಿ ನೀಡುವಂತೆ ರಾಜ್ಯಪಾಲ ವಜುಭಾಯ್ ವಾಲಾ ಅವರು ಸೋಮವಾರ ರಾಜ್ಯ ಸರ್ಕಾರಕ್ಕೆ ಸೂಚಿಸಿದ್ದಾರೆ.
ಇಂದು ದೂರವಾಣಿ ಮೂಲಕ ಮೂಲಕ ಸರ್ಕಾರದಿಂದ ಮಾಹಿತಿ ಪಡೆದಿರುವ ರಾಜ್ಯಪಾಲರು, ಪ್ರಕರಣದ ಸಂಪೂರ್ಣ ವರದಿ ನೀಡುವಂತೆ ಸೂಚನೆ ನೀಡಿದ್ದಾರೆ. ಮತ್ತೊಂದೆಡೆ ಲೋಕಾಯುಕ್ತರ ಪದಚ್ಯುತಿ ವಿಚಾರ ನಮಗೆ ಸಂಬಂಧಿಸಿದ್ದಲ್ಲ, ಅದು ರಾಜ್ಯಪಾಲರಿಗೆ ಬಿಟ್ಟ ವಿಚಾರ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದ್ದಾರೆ.
ಲೋಕಾಯುಕ್ತ ಸಂಸ್ಥೆಯಲ್ಲಿ ನಡೆದಿರುವ ಭ್ರಷ್ಟಾಚಾರ ಪ್ರಕರಣ ತೀವ್ರ ಸ್ವರೂಪ ಪಡೆಯುತ್ತಿದ್ದಂತೆಯೇ, ವಜುಭಾಯ್ ವಾಲಾ ಅವರು ಪ್ರಕರಣದ ಬಗ್ಗೆ ಸಂಪೂರ್ಣ ಮಾಹಿತಿ ಕೊಡುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿದ್ದಾರೆ ಎಂದು ಮೂಲಗಳು ಹೇಳಿವೆ.
ಏತನ್ಮಧ್ಯೆ ಲೋಕಾಯುಕ್ತ ನ್ಯಾ.ವೈ ಭಾಸ್ಕರ್ ರಾವ್ ಜೊತೆ ದೂರವಾಣಿಯಲ್ಲಿ ಮಾತುಕತೆ ನಡೆಸಿದ್ದು, ಈ ವೇಳೆ ಲೋಕಾಯುಕ್ತ ವಿಚಾರದಲ್ಲಿ ರಾಜ್ಯ ಸರ್ಕಾರದ ನಡವಳಿಕೆ ಬಗ್ಗೆ ರಾಜ್ಯಪಾಲರು ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
Advertisement