
ಬೆಳಗಾವಿ: ಸಚಿವರು ಹಾಗೂ ಶಾಸಕರ ಗೈರು ಹಾಜರಿಯಲ್ಲೇ ಕಳೆದ 10 ದಿನಗಳಿಂದ ಬೆಳಗಾವಿಯ ಸುವರ್ಣಸೌಧದಲ್ಲಿ ನಡೆದ ಮಳೆಗಾಲದ ಅಧಿವೇಶನ ಶುಕ್ರವಾರ ಅಂತ್ಯಕಂಡಿದ್ದು, ಅಧಿವೇಶನ ತೃಪ್ತಿ ತಂದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ಪ್ರತಿಪಕ್ಷಗಳು ಸರ್ಕಾರದ ತಪ್ಪು, ಒಪ್ಪುಗಳನ್ನು ಹೇಳಬೇಕು. ಅದರೇ ರೀತಿ ಸರ್ಕಾರ ಸಹ ಪ್ರತಿಪಕ್ಷಗಳ ಸಲಹೆಯನ್ನು ಸ್ವೀಕರಿಸಿದೆ. ಸೋಮವಾರ ಬೆಂಗಳೂರಿನಲ್ಲಿ ಅಧಿವೇಶನ ಮುಂದುವರೆಯಲಿದೆ ಎಂದು ಸಿಎಂ ತಿಳಿಸಿದರು.
ಇನ್ನು ಇದೇ ವೇಳೆ ಶಾಸಕ ಹಾಗೂ ಸಚಿವರ ಗೈರು ಹಾಜರಿ ಬಗ್ಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಗೈರು ಹಾಜರಾಗುವುದು ಸರಿಯಲ್ಲ. ಎಲ್ಲರೂ ಕಲಾಪದಲ್ಲಿ ಭಾಗವಹಿಸಬೇಕು ಎಂದು ಹೇಳಿದರು.
ಸರ್ಕಾರವನ್ನು ಬಡಿದೆಬ್ಬಿಸುವ ಕೆಲಸ ಮಾಡಿದ್ದೇವೆ: ಶೆಟ್ಟರ್
ಅಧಿವೇಶನದ ವೇಳೆ ನಾವು ಸರ್ಕಾರವನ್ನು ಬಡಿದೆಬ್ಬಿಸುವ ಕೆಲಸ ಮಾಡಿದ್ದೇವೆ. ಈ ಬಾರಿ ಸದನದಲ್ಲಿ ಹಲವು ವಿಚಾರಗಳು ಚರ್ಚೆ ಬಂದಿವೆ. ಇಂದು ಸಹ ನಾನು ಕ್ರಿಕೆಟ್ ಬೆಟ್ಟಿಂಗ್ ದಂಧೆಯ ಬಗ್ಗೆ ಪ್ರಸ್ತಾಪಿಸಿದೆ. ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರು ಸೋಮವಾರ ಚರ್ಚೆ ಅವರಕಾಶ ನೀಡುವುದಾಗಿ ಹೇಳಿದ್ದಾರೆ ಎಂದು ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ.
ಇನ್ನು ಬೆಳಗಾವಿ ಅಧಿವೇಶನದ ಬಗ್ಗೆ ಪ್ರತಿಕ್ರಿಯಿಸಿರುವ ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಅವರು, ಈ ಅಧಿವೇಶನ ಪೂರ್ಣ ತೃಪ್ತಿ ತಂದಿಲ್ಲ. ಅರ್ಧ ತೃಪ್ತಿ ತಂದಿದೆ. ಹೀಗಾಗಿ ಬೆಂಗಳೂರಿನಲ್ಲಿ ನಮ್ಮ ಹೋರಾಟ ಮುಂದುವರೆಯಲಿದೆ ಎಂದು ಹೇಳಿದ್ದಾರೆ.
Advertisement