
ಬೆಂಗಳೂರು: ಲೋಕಾಯುಕ್ತ ನ್ಯಾಯಮೂರ್ತಿ ವೈ.ಭಾಸ್ಕರ್ ರಾವ್ ಅವರ ಪುತ್ರ ಅಶ್ವಿನ್ ರಾವ್ ಅವರ ವಿರುದ್ಧದ ಭ್ರಷ್ಟಾಚಾರ ಪ್ರಕರಣ ಸಂಬಂಧ ಸರ್ಕಾರ ವಿಶೇಷ ತನಿಖಾ ತಂಡ(ಎಸ್‌ಐಟಿ) ರಚನೆ ಮಾಡುವ ಮೂಲಕ ಆರೋಪಿಗಳ ಬೆಂಬಲಕ್ಕೆ ನಿಂತಿದೆ ಎಂದು ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರು ಶನಿವಾರ ಆರೋಪಿಸಿದ್ದಾರೆ.
ಇಂದು ಶಾಸಕರ ಭವನದಲ್ಲಿ ಭೂ ಕಬಳಿಕೆ ವಿರೋಧಿ ಹೋರಾಟ ಸಮತಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎಸ್‌ಐಟಿಗೆ ಆರೋಪಿಗಳನ್ನು ಬಂಧಿಸುವ ಅಧಿಕಾರ ಇಲ್ಲ. ಎಸ್‌ಐಟಿ ಹಲ್ಲಿಲ್ಲದ ಸಂಸ್ಥೆ. ಹೀಗಾಗಿ ಪ್ರಕರಣವನ್ನು ಸಿಬಿಐಗೆ ಕೊಡಬೇಕು ಎಂದು ಒತ್ತಾಯಿಸಿದರು.
ರಾಜ್ಯ ಸರ್ಕಾರ ಐಎಎಸ್ ಅಧಿಕಾರಿ ಡಿ.ಕೆ.ರವಿ ನಿಗೂಢ ಸಾವಿನ ಪ್ರಕರಣ ಹಾಗೂ ಒಂದಂಕಿ ಲಾಟರಿ ಹಗರಣವನ್ನು ಸಿಬಿಐ ವಹಿಸುತ್ತದೆ. ಆದರೆ ಸ್ವತಃ ಲೋಕಾಯುಕ್ತರ ಪುತ್ರರೇ ಹಗರಣದಲ್ಲಿ ಭಾಗಿಯಾಗಿರುವ ಈ ಪ್ರಕರಣವನ್ನು ಏಕೆ ಸಿಬಿಐಗೆ ವಹಿಸುತ್ತಿಲ್ಲ ಎಂದು ಪ್ರಶ್ನಿಸಿದರು.
ಇದೇ ವೇಳೆ, ನ್ಯಾಯಮೂರ್ತಿ ಭಾಸ್ಕರ್ ರಾವ್ ಅವರು ಈ ಕೂಡಲೇ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಬೇಕು ಎಂದ ಮಾಜಿ ಲೋಕಾಯುಕ್ತರು, ರಾಜ್ಯದ ಜನರ ಸಹ ಲೋಕಾಯುಕ್ತರ ರಾಜಿನಾಮೆ ಒತ್ತಾಯಿಸಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೂ ಅವರು ರಾಜಿನಾಮೆ ಕೊಡದಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ ಎಂದರು.
Advertisement