
ಬೆಂಗಳೂರು: ಲೋಕಾಯುಕ್ತ ಕಚೇರಿಯಲ್ಲಿ ನಡೆದಿದೆ ಎನ್ನಲಾದ ಲಂಚ ಪ್ರಕರಣ ಸಂಬಂಧ ತನಿಖೆ ಚುರುಕು ಗೊಳಿಸಿರುವ ವಿಶೇಷ ತನಿಖಾ ತಂಡದ (ಎಸ್‍ಐಟಿ) ತನಿಖಾಧಿಕಾರಿ ಡಿಸಿಪಿ ಲಾಬೂರಾಮ್ ಅವರು ಸೋಮವಾರ ಲೋಕಾಯುಕ್ತ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಹಲವು ತಾಸು ಚರ್ಚೆ ನಡೆಸಿದರು.
ಎಡಿಜಿಪಿ ಪ್ರೇಮ್ ಶಂಕರ್ ಮೀನಾ ಹಾಗೂ ಎಸ್ಪಿ ಸೋನಿಯಾ ನಾರಂಗ್ ಅವರೊಂದಿಗೆ ಸುಮಾರು ಮೂರು ತಾಸುಗಳ ಕಾಲ ಚರ್ಚಿಸಿ ಪ್ರಕರಣದ ಬಗ್ಗೆ ಮಹತ್ವದ ಮಾಹಿತಿ ಸಂಗ್ರಹಿಸಿ ಕೆಲ ದಾಖಲೆಗಳನ್ನು ಪಡೆದುಕೊಂಡರು ಎಂದು ತಿಳಿದು ಬಂದಿದೆ. ತಂದೆ ಲೋಕಾಯುಕ್ತರು ಎನ್ನುವ ಧೈರ್ಯದಿಂದಲೇ ಮಗ ಅಶ್ವಿನ್‍ರಾವ್ ಹಲವರಿಗೆ ಬೆದರಿಕೆ ಹಾಕುತ್ತಿದ್ದರು.
ಈ ವಿಚಾರ ತಿಳಿದಿದ್ದರೂ ಅದನ್ನು ತಡೆಯಲು ಲೋಕಾಯುಕ್ತರು ಏಕೆ ಯತ್ನಿಸಿಲ್ಲ. ಇದರಲ್ಲಿ ಅವರ ಪಾತ್ರ ಏನು ಎನ್ನುವುದರ ಬಗ್ಗೆ ತಿಳಿಯಲು ನ್ಯಾ. ವೈ.ಭಾಸ್ಕರ್‍ರಾವ್ ಅವರನ್ನು ವಿಚಾರಣೆಗೊಳಪಡಿಸಲು ಅಧಿಕಾರಿಗಳು ನಿರ್ಧರಿಸಿದ್ದಾರೆ. ಅರಮನೆ ರಸ್ತೆಯಲ್ಲಿರುವ ಸಿಐಡಿ ಕಚೇರಿ ವರಣದಲ್ಲಿ ಎಸ್‍ಐಟಿ ತನಿಖೆಗಾಗಿ ಕಚೇರಿ ವ್ಯವಸ್ಥೆ ಕಲ್ಪಿಸಲಾಗಿದೆ. ಹೀಗಾಗಿ, ಎಸ್‍ಐಟಿ ತನಿಖೆ, ಆರೋಪಿಗಳ ವಿಚಾರಣೆ ಎಲ್ಲವೂ ಅಲ್ಲೇನಡೆಯಲಿದೆ ಎಂದು ತಿಳಿದು ಬಂದಿದೆ.
ಅಶ್ವಿನ್ ಬಂಧನ ಶೀಘ್ರ: ಬಿಡಿಎ, ಬಿಬಿಎಂಪಿ, ಕಂದಾಯ ಇಲಾಖೆ, ಲೋಕೋಪಯೋಗಿ ಇಲಾಖೆ ಹೀಗೆ ರಾಜ್ಯದ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಲೋಕಾಯುಕ್ತ ಕಚೇರಿ ಯಿಂದಲೇ ಕರೆ ಮಾಡಿ ಲಂಚಕ್ಕೆ ಬೇಡಿಕೆ ಇಟ್ಟಿರುವ ಆರೋಪ ನ್ಯಾ. ವೈ.ಭಾಸ್ಕರ್‍ರಾವ್ ಪುತ್ರ ಅಶ್ವಿನ್‍ರಾವ್ ಮೇಲಿದೆ.
ಇದರೊಂದಿಗೆ ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಅಧಿಕಾರಿಗಳ ಹೆಸರುಗಳನ್ನು ಲೋಕಾಯುಕ್ತ ಸಾರ್ವಜನಿಕ ಸಂಪರ್ಕಾಧಿಕಾರಿ (ಪಿಆರ್‍ಓ) ಸೈಯ್ಯದ್ ರಿಯಾಜ್ ತಲುಪಿಸುತ್ತಿದ್ದರು ಎನ್ನುವ ಆರೋಪ ಪ್ರಮುಖಲಾಗಿದೆ. ಹೀಗಾಗಿ, ಒಂದೆರಡು ದಿನಗಳಲ್ಲಿ ಅಶ್ವಿನ್ ರಾವ್ ಬಂಧಿಸಿ ವಿಚಾರಣೆಗೊಳಪಡಿಸುವ ಸಾಧ್ಯತೆ ದಟ್ಟವಾಗಿವೆ. ಮತ್ತೊಂದೆಡೆ ಮೆಕ್ಕಾ ಪ್ರವಾಸಕ್ಕೆ ತೆರಳಿರುವ ರಿಯಾಜ್ ವಾಪಸಾತಿಗಾಗಿ ಅಧಿಕಾರಿಗಳು ಕಾಯುತ್ತಿದ್ದಾರೆಂದು ತಿಳಿದು ಬಂದಿದೆ.
ಆದರೆ, ಪೂರ್ಣ ಪ್ರಮಾಣದಲ್ಲಿ ತನಿಖೆ ಆರಂಭಕ್ಕೆ ಮುನ್ನ ಮಾಹಿತಿ ಸಂಗ್ರಹ ಹಾಗೂ ಪ್ರಬಲ ಸಾಕ್ಷಿಗಳ ಸಂಗ್ರಹಕ್ಕೆ ತನಿಖಾಧಿಕಾರಿಗಳು ಮುಂದಾಗಿದ್ದಾರೆ. ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ ವಶಕ್ಕೆ ಪಡೆಯಬೇಕಿದೆ. ಹೀಗಾಗಿ, ನ್ಯಾಯಾಲಯ ದಿಂದ ಹೆಚ್ಚು ಸಮಯ ವಶಕ್ಕೆ ಅನುಮತಿ ಸಿಕ್ಕಷ್ಟು ಹೆಚ್ಚಿನ ಮಾಹಿತಿ ಸಂಗ್ರಹಿಸಬಹುದು. ಹೀಗಾಗಿ, ಅಶ್ವಿನ್‍ರಾವ್ ವಿರುದ್ಧದ ಎಲ್ಲ ದೂರುಗಳ ಮಾಹಿತಿ ಹಾಗೂ ಅವುಗಳ ದಾಖಲೆ ಸಂಗ್ರಹಿಸಿ ಬಂಧಿಸಿದ ನಂತರ ಆ ದಾಖಲೆಗಳ ಆಧಾರದ ಮೇಲೆ ಆರೋಪಿಯನ್ನು ವಶಕ್ಕೆ ತೆಗೆದು ಕೊಳ್ಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ದೂರುದಾರರಿಗೂ ನೋಟಿಸ್: ಲೋಕಾ ಯುಕ್ತ ಕಚೇರಿ ಲಂಚ ಹಗರಣ ಬಯಲಿಗೆ ಬರಲು ಕಾರಣರಾಗಿರುವ ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಎಂಜಿನಿಯರ್ ಕೃಷ್ಣಮೂರ್ತಿ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಎಸ್‍ಐಟಿ ಅಧಿಕಾರಿಗಳು ನೋಟಿಸ್ ಜಾರಿ ಮಾಡಿದ್ದಾರೆ.
Advertisement