
ರಾಜಮಂಡ್ರಿ: ಆಂಧ್ರಪ್ರದೇಶದ ಗೋದಾವರಿ ಪುಷ್ಕರ ಮೇಳದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ 10 ಲಕ್ಷ ಪರಿಹಾರವನ್ನು ಆಂಧ್ರಪ್ರದೇಶದ ಸರ್ಕಾರ ಘೋಷಿಸಿದೆ.
ದಕ್ಷಿಣದ ಕುಂಭಮೇಳ ಎಂದು ಕರೆಸಿಕೊಳ್ಳುವ ಗೋದಾವರಿ ಪುಷ್ಕರ ಮೇಳದಲ್ಲಿ ಕಾಲ್ತುಳಿತಕ್ಕೆ ಮೃತಪಟ್ಟವರ ಸಂಖ್ಯೆ 27ಕ್ಕೆ ಏರಿಕೆಯಾಗಿದ್ದು, ಗಾಯಗೊಂಡವರ ಸ್ಥಿತಿ ಗಂಭೀರವಾಗಿದೆ. ಗಾಯಾಳುಗಳಿಗೆ ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ದುರ್ಘಟನೆಯಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ 10 ಲಕ್ಷ ಪರಿಹಾರ ನೀಡುವುದಾಗಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಆದೇಶಿಸಿದ್ದಾರೆ.
144 ವರ್ಷಗಳಿಗೊಮ್ಮೆ ನಡೆಯುವ ಗೋಧಾವರಿ ಮಹಾಪುಷ್ಕರ ಮೇಳ ಇಂದಿನಿಂದ ಆರಂಭವಾಗಿತ್ತು. ಮೊದಲ ದಿನದಿಂದಲೇ ಲಕ್ಷಾಂತರ ಜನ ಆಗಮಿಸಿದ್ದರು. ರಾಜಮಂಡ್ರಿಯ ಪುಷ್ಕರ ಘಾಟ್ ನಲ್ಲಿ ನದಿಯಲ್ಲಿ ಪುಣ್ಯ ಸ್ನಾನ ಮಾಡುವುದಕ್ಕಾಗಿ ಭಕ್ತಾದಿಗಳ ನಡುವೆ ತಳ್ಳಾಟ, ನೂಕುನುಗ್ಗಲಾಟ ಉಂಟಾಗಿತ್ತು. ಈ ವೇಳೆ ಉಂಟಾದ ಕಾಲ್ತುಳಿತಕ್ಕೆ 27 ಜನರು ಸಾವನ್ನಪ್ಪಿದ್ದು, ಹಲವಾರು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಈ ಘಟನೆ ನಡೆಯುತ್ತಿದ್ದಂತೆ, ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಪರಿಹಾರ ಕಾರ್ಯದ ಉಸ್ತುವಾರಿ ವಹಿಸಿಕೊಂಡು, ಕಂಟ್ರೋಲ್ ರೂಮ್ ನಲ್ಲಿ ಬೀಡು ಬಿಟ್ಟಿದ್ದಾರೆ. ಅಲ್ಲದೇ ಪುಷ್ಕರ್ ಮೇಳದಲ್ಲಿ ಸಹಾಯವಾಣಿ ತೆರಯಲಾಗಿದೆ. ಯಾರಿಗೆ ಹೆಚ್ಚಿನ ಮಾಹಿತಿ ಬೇಕೋ ಅವರು ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ಪಡೆಯಬಹುದಾಗಿದೆ.
ಸ್ಥಳದಲ್ಲಿ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತಿದ್ದು, ಜನರನ್ನು ಬೇರೆ ಘಾಟ್ ನತ್ತ ಕಳುಹಿಸುತ್ತಿದ್ದಾರೆ.
Advertisement