
ಜಮ್ಮು: ಭಾರತೀಯ ಪರಂಪರೆ ಎಲ್ಲರಿಗೂ ಸಮಾನವಾದದ್ದು ಎಂದಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ, ರಾಜಕೀಯ ಗುರುತಿನಿಂದ ಅದನ್ನು ಒಡೆಯಲಾಗುವುದಿಲ್ಲ ಎಂದಿದ್ದಾರೆ.
ಕಾಂಗ್ರೆಸ್ ನಾಯಕ ಗಿರಿಧರ್ ಲಾಲ್ ಧೋಗ್ರಾ ಅವರ ಜನ್ಮ ಶತಾಬ್ಧಿ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ಗಿರಿಧರ್ ಲಾಲ್ ಧೋಗ್ರಾ ಅವರು ವಿತ್ತ ಸಚಿವ ಅರುಣ್ ಜೇಟ್ಲಿ ಅವರ ಮಾವ.
"ನಮ್ಮೆಲ್ಲರಿಗೂ ಭಾರತೀಯ ಪರಂಪರೆ ಸಮಾನವಾದದ್ದು, ರಾಜಕೀಯ ಹಿತಾಸಕ್ತಿಗಳಂತೆ ಅದನ್ನು ವಿಭಾಗಳಾಗಿ ವಿಂಗಡಿಸಲು ಸಾಧ್ಯವಿಲ್ಲ" ಎಂದು ಗಿರಿಧರ್ ಅವರಿಗೆ ಗೌರವ ಸಮರ್ಪಿಸಿ ಮಾತನಾಡಿದ್ದಾರೆ.
ಈ ದಿವಂಗತ ಮುಖಂಡ ಅವರ ಪಕ್ಷ, ಸಿದ್ಧಾಂತ ಹೊರತುಪಡಿಸಿ ದೇಶಕ್ಕಾಗಿ ಕೆಲಸ ಮಾಡಿದ್ದಾರೆ ಎಂದಿದ್ದಾರೆ ಮೋದಿ. ಹಾಗೆಯೇ ಹಾಸ್ಯ ಚಟಾಕಿ ಹಾರಿಸಿದ ಅವರು ಈ ಕಾಂಗ್ರೆಸ್ ಮುಖಂಡ ಮನುಷ್ಯರ ಬಗ್ಗೆ ಅತಿ ಹೆಚ್ಚು ಅರ್ಥ ಮಾಡಿಕೊಂಡಿದ್ದರು ಎಂದೆನಿಸುತ್ತದೆ ಏಕೆಂದರೆ ಅವರು ಅರುಣ್ ಜೇಟ್ಲಿ ಅಂತಹವರನ್ನು ಅಳಿಯನಾಗಿ ಸ್ವೀಕರಿಸಿದ್ದರು ಎಂದಿದ್ದಾರೆ.
ದಿವಂಗತ ಹಿರಿಯ ಕಾಂಗ್ರೆಸ್ ಮುಖಂಡನ ಅಳಿಯನಾಗಿದ್ದರೂ ಜೇಟ್ಲಿ ಅವರು ತಮ್ಮ ಸ್ವಂತ ರಾಜಕೀಯ ನಿಲುವುಗಳಿಗೆ ಬದ್ಧರಾಗಿದ್ದರು ಮತ್ತು ಅವರ ಮಾವನ ರಾಜಕೀಯ ಪ್ರಭಾವವನ್ನು ಬಳಸಿಕೊಳ್ಳಲಿಲ್ಲ ಎಂದು ಅವರು ತಿಳಿಸಿದ್ದಾರೆ.
"ಇತ್ತೀಚಿಗೆ ಅಳಿಯಂದಿರು ತಮ್ಮ ಅತ್ತೆ ಮಾವಂದಿರಿಗೆ ಹೇಗೆ ಮುಜುಗರ ಉಂಟುಮಾಡಿದ್ದಾರೆ ಎಂದು ನಾವೆಲ್ಲಾ ತಿಳಿದಿದ್ದೇವೆ" ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಅಳಿಯ ರಾಬರ್ಟ್ ಅವರನ್ನು ಪರೋಕ್ಷವಾಗಿ ಅಪಹಾಸ್ಯ ಮಾಡಿದ್ದಾರೆ.
ಇದೇ ಸಮಯದಲ್ಲಿ ಮುಸ್ಲಿಂ ಬಾಂಧವರಿಗೆ ಈದ್ ಶುಭಾಶಯ ಕೋರಿದ ಮೋದಿ ನಂತರ ನವದೆಹಲಿಗೆ ಹೊರಟಿದ್ದಾರೆ.
Advertisement