
ಬೆಂಗಳೂರು: ನಗರ ಪೊಲೀಸ್ ಆಯುಕ್ತ ಎಂ.ಎನ್.ರೆಡ್ಡಿ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಿದ್ದ ಐಪಿಎಸ್ ಅಧಿಕಾರಿ, ಕರ್ನಾಟಕ ಪೊಲೀಸ್ ಗೃಹ ನಿರ್ಮಾಣ ನಿಗಮದ ಡಿಜಿಪಿ ಸುಶಾಂತ್ ಮಹಾಪಾತ್ರ ಅವರ ವಿರುದ್ಧ ಶಿಸ್ತು ಕ್ರಮಕ್ಕೆ ಮುಂದಾಗಿರುವ ಸರ್ಕಾರ ಅವರನ್ನು ಅಮಾನತು ಮಾಡುವ ಸಾಧ್ಯತೆ ಇದೆ.
ಎಂ.ಎನ್.ರೆಡ್ಡಿ ಅವರು ಪೊಲೀಸ್ ಗೃಹ ನಿಗಮದಲ್ಲಿ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ವೇಳೆ ಅಧಿಕಾರ ದುರುಪಯೋಗ ಮಾಡಿಕೊಂಡು, ಗೃಹ ನಿರ್ಮಾಣ ಕಾಮಗಾರಿಗಳಲ್ಲಿ ಅಕ್ರಮ ಎಸಗಿದ್ದಾರೆ ಎಂದು ಆರೋಪಿಸಿ ಮಹಾಪಾತ್ರ ಅವರು ಉಪ ಲೋಕಾಯುಕ್ತ ಸುಭಾಶ್ ಬಿ.ಅಡಿ ಅವರಿಗೆ ದೂರು ನೀಡಿದ್ದರು.
ಮಹಾಪಾತ್ರ ಅವರು ಮಾಧ್ಯಮಗಳ ಮುಂದೆ ಬಹಿರಂಗವಾಗಿ ಪೊಲೀಸ್ ಆಯುಕ್ತರ ವಿರುದ್ಧ ಆರೋಪ ಮಾಡಿದ ನಂತರ, ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಕೆ.ಜೆ.ಜಾರ್ಜ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಕೌಶಿಕ್ ಮುಖರ್ಜಿ ಹಾಗೂ ಪೊಲೀಸ್ ಮಹಾ ನಿರ್ದೇಶಕ ಓಂ ಪ್ರಕಾಶ್ ಅವರು ಸಭೆ ಸೇರಿ, ಮಹಾಪಾತ್ರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳುವ ಬಗ್ಗೆ ಚರ್ಚಿಸಿದ್ದಾರೆ ಎನ್ನಲಾಗಿದೆ.
ಎಂ.ಎನ್.ರೆಡ್ಡಿ ಅವರು ಸಿಬಿಐ ಬ್ಲಾಕ್ ಲಿಸ್ಟ್‌ನಲ್ಲಿದ್ದ ಪರ್ಲ್ಸ್ ಕನ್ಸ್‌ಟ್ರಕ್ಷನ್ ಕಂಪನಿಗೆ ಗುತ್ತಿಗೆ ನೀಡಿದ್ದಾರೆ. ಹೀಗಾಗಿ ಇದರಲ್ಲಿ ಭಾರಿ ಅವ್ಯವಹಾರ ನಡೆದಿರುವ ಸಾಧ್ಯತೆ ಇದ್ದು, ಈ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಕಳೆದ ಮಂಗಳವಾರ ಮಹಾಪಾತ್ರ ಲೋಕಾಯುಕ್ತರಿಗೆ ದೂರು ನೀಡಿದ್ದರು.
Advertisement