ನವದೆಹಲಿ: ದೆಹಲಿ ಪೊಲೀಸರನ್ನು 'ತುಲ್ಲ' (ಡೊಳ್ಳು ಹೊಟ್ಟೆ ಹೊತ್ತು ನಿಧಾನವಾಗಿ ಚಲಿಸುವ ಪೊಲೀಸರು) ಎಂದು ಕರೆದು ಅವಹೇಳನ ಮಾಡಿದ್ದಾರೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ವಿರುದ್ಧ ಭಾನುವಾರ ಪೋಲಿಸ್ ಠಾಣೆಯಲ್ಲಿ ದೂರು ಸಲ್ಲಿಸಲಾಗಿದೆ.
ಕೇಜ್ರಿವಾಲ್ ಬಳಸಿದ ಭಾಷೆಯ ಬಗೆಗೆ ನೊಂದಿದ್ದೇನೆ ಎಂದಿರುವ ದೂರುದಾರ ಪೊಲೀಸ್ ಕಾಂಸ್ಟೆಬಲ್ ಹರ್ವಿಂದರ್ ಅವರು ದೆಹಲಿಯ ಗೋವಿಂದಪುರಿ ಪೋಲಿಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.
"ನಾನು ಅರವಿಂದ್ ಕೇಜ್ರಿವಾಲ್ ಅವರನ್ನು ಗೌರವಿಸುತ್ತೇನೆ. ಅವರಿಂದ ಇಂತಹ ಭಾಷೆ ನಿರೀಕ್ಷಿಸಿರಲಿಲ್ಲ" ಎಂದು ಹರ್ವಿಂದರ್ ತಿಳಿಸಿದ್ದಾರೆ.
ಸುದ್ದಿವಾಹಿನಿ ಇಂಡಿಯಾ ಟುಡೆಗೆ ನೀಡಿದ ಸಂದರ್ಶನದಲಿ ಜುಲೈ ೧೭ ರಂದು ಅರವಿಂದ್ ಕೇಜ್ರಿವಾಲ್ ದೆಹಲಿ ಪೊಲೀಸರಿಗೆ 'ತುಲ್ಲ' ಎಂಬ ಪದ ಬಳಸಿದ್ದರು.
"ಭ್ರಷ್ಟಾಚಾರದಲ್ಲಿ ಭಾಗಿಯಾಗುವ ಯಾರ ಮೇಲೆ ಬೇಕಾದರೂ ಭ್ರಷ್ಟಾಚಾರ ವಿರೋಧಿ ಸೆಲ್ ನಲ್ಲಿ ದೂರು ದಾಖಲಿಸಬಹುದು. ಆದರೆ ದೆಹಲಿ ಪೋಲೀಸರ ವಿರುದ್ಧ ದೂರು ಸಲ್ಲಿಸಲು ಸಾಧ್ಯವಿಲ್ಲ ಎಂದು ಜನ ಹೇಳುತ್ತಾರೆ. ದೆಹಲಿ ಪೋಲೀಸರ 'ತುಲ್ಲಾ'ಗಳು ರಸ್ತೆ ಬದಿಯ ಮಾರಾಟಗಾರರಿಂದ ಲಂಚ ಕೇಳಿದಾಗ ಅವರ ವಿರುದ್ಧ ದೂರು ಸಲ್ಲಿಸುವಂತಿಲ್ಲ.. ಇದು ಒಪ್ಪಲು ಸಾಧ್ಯವಿಲ್ಲ" ಎಂದು ಕೇಜ್ರಿವಾಲ್ ತಿಳಿಸಿದ್ದರು.
ಕೇಜ್ರಿವಾಲ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ದೆಹಲಿ ಪೊಲೀಸ್ ಮುಖ್ಯ ನಿರ್ದೇಶಕ ಬಿ ಎಸ್ ಬಸ್ಸಿ, ಯಾವುದಾದರೂ ಮನುಷ್ಯ ಈ ಪದ ಬಳಸಬಹುದು ಎಂದು ನಂಬುವುದಕ್ಕೂ ಸಾಧ್ಯವಿಲ್ಲ ಎಂದಿದ್ದಾರೆ.
"ರಾಜ್ಯದ ಎಲ್ಲಾ ಸಂಸ್ಥೆಗಳು ಮತ್ತು ವ್ಯವಸ್ಥೆಗಳು ಪರಸ್ಪರ ಗೌರವಿಸಬೇಕು. ಪರಸ್ಪರ ಗೌರವದಿಂದ ಮಾತ್ರ ದೇಶದ ಪ್ರಗತಿ ಸಾಧ್ಯ. ಇಂತಹುದನ್ನು ಗೌರವಾನ್ವಿತ ಮುಖ್ಯಮಂತ್ರಿ ಹೇಳಿದ್ದಾರೆ ಎಂದರೆ ನಂಬಲು ಸಾಧ್ಯವಾಗುತ್ತಿಲ್ಲ" ಎಂದು ಬಸ್ಸಿ ತಿಳಿಸಿದ್ದಾರೆ.
Advertisement