ಇನ್ನೆರಡು ದಿನದಲ್ಲಿ ಲೋಕಾಯುಕ್ತ ಕಾಯ್ದೆಗೆ ತಿದ್ದುಪಡಿ: ಜಯಚಂದ್ರ

ಲೋಕಾಯುಕ್ತ ಕಾಯ್ದೆಯನ್ನು ತಕ್ಷಣವೇ ತಿದ್ದುಪಡಿ ಮಾಡಬೇಕೆಂಬ ಮೇಲ್ಮನೆ ಸದಸ್ಯರ ಆಕ್ರೋಶಭರಿತ ಒಕ್ಕೊರಲ ಅಭಿಪ್ರಾಯಕ್ಕೆ ಸರ್ಕಾರ....
ಟಿ.ಬಿ.ಜಯಚಂದ್ರ (ಸಂಗ್ರಹ ಚಿತ್ರ)
ಟಿ.ಬಿ.ಜಯಚಂದ್ರ (ಸಂಗ್ರಹ ಚಿತ್ರ)

ಬೆಂಗಳೂರು/ವಿಧಾನಪರಿಷತ್: ಲೋಕಾಯುಕ್ತ ಕಾಯ್ದೆಯನ್ನು ತಕ್ಷಣವೇ ತಿದ್ದುಪಡಿ ಮಾಡಬೇಕೆಂಬ ಮೇಲ್ಮನೆ ಸದಸ್ಯರ ಆಕ್ರೋಶಭರಿತ ಒಕ್ಕೊರಲ ಅಭಿಪ್ರಾಯಕ್ಕೆ ಸರ್ಕಾರ ಸಮ್ಮತಿ ಸೂಚಿಸಿದ್ದು, ಇನ್ನೆರಡು ದಿನದಲ್ಲಿ ತಿದ್ದುಪಡಿ ಮಾಡಿದ ಹೊಸ ವಿಧೇಯಕವನ್ನು ಸದನದಲ್ಲಿ ಮಂಡಿಸುವುದಾಗಿ ಘೋಷಿಸಿದೆ.

ಲೋಕಾಯುಕ್ತ ಭ್ರಷ್ಟಾಚಾರ ಕುರಿತು ಗಮನ ಸೆಳೆವ ಸೂಚನೆ ಕುರಿತಂತೆ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಹಲವು ಸದಸ್ಯರು, ಹಾಲಿ ಇರುವ ಲೋಕಾಯುಕ್ತ ಕಾಯ್ದೆಯನ್ನು ರದ್ದುಗೊಳಿಸಬೇಕು ಅಥವಾ ತಿದ್ದುಪಡಿ ಮಾಡಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.

ಇದಕ್ಕೆ ಉತ್ತರ ನೀಡಿದ ಕಾನೂನು ಸಚಿವ ಟಿ.ಬಿ.ಜಯಚಂದ್ರ ಅವರು, ನಾವು ಜನರಿಂದ ಆಯ್ಕೆಯಾದವರು, ಜನರ ಅಪೇಕ್ಷೆಯನ್ನು ಈಡೇರಿಸುವುದು ನಮ್ಮ ಕರ್ತವ್ಯ. ಯಾರಿಗೂ ನಮ್ಮ ಹಕ್ಕನ್ನು ಒತ್ತೆ ಇಡುವುದು ಬೇಡವೆಂಬ ತೀರ್ಮಾನಕ್ಕೆ ಬರಲಾಗಿದೆ. ಈ ಸದನದಲ್ಲೂ ಸಹ ಲೋಕಾಯುಕ್ತ ಕಾಯ್ದೆಯನ್ನು ತಿದ್ದುಪಡಿ ಮಾಡಬೇಕು ಎಂಬ ಉತ್ತಮ ಸಲಹೆ ಬಂದಿದೆ. ಅದನ್ನು ಪರಿಗಣಿಸುತ್ತೇವೆ ಎಂದರು.

ಇನ್ನೆರಡು ದಿನಗಳಲ್ಲಿ ತಿದ್ದುಡಿಯಾದ ವಿಧೇಯಕವನ್ನು ಸದನದಲ್ಲಿ ಮಂಡಿಸುವುದಾಗಿ ಹೇಳಿದ ಸಚಿವರು, ಲೋಕಾಯುಕ್ತ ಕಾಯ್ದೆಯನ್ನು ರಚಿಸಿದ್ದು ಇದೇ ಸದನ. ಈ ಮೂಲಕ ಜನರಿಂದ ಆಯ್ಕೆಯಾದ ಜನಪ್ರತಿನಿಧಿಗಳು ಕಾಯ್ದೆ ರಚಿಸಿ ತಮ್ಮ ಕೈಯನ್ನು ತಾವೇ ಕಟ್ಟಿಕೊಂಡಂತಾಗಿದೆ. ಲೋಕಾಯುಕ್ತ ಹಾಗೂ ಉಪ ಲೋಕಾಯುಕ್ತರು ಯಾರಿಗೆ ಬಾಧ್ಯಸ್ಥರು ಎಂಬುದು ಪ್ರಶ್ನೆ. ಹೀಗಾಗಿ ಸೂಕ್ತ ಕಾನೂನು ತಿದ್ದುಪಡಿ ಮಾಡುತ್ತೇವೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com