ರೈತರ ಆತ್ಮಹತ್ಯೆ ಬಗ್ಗೆ ಕೇಂದ್ರ ಕೃಷಿ ಸಚಿವರ ಹೇಳಿಕೆಗೆ ವೆಂಕಯ್ಯ ನಾಯ್ಡು ಆಕ್ಷೇಪ
ಬೆಂಗಳೂರು: ರೈತರ ಆತ್ಮಹತ್ಯೆಯಂಥ ಸೂಕ್ಷ್ಮ ವಿಚಾರಕ್ಕೆ ಸಂಬಂಧಿಸಿ ಕೇಂದ್ರ ಕೃಷಿ ಸಚಿವ ರಾಧಾಮೋಹನ್ ಸಿಂಗ್ ಅವರು ರಾಜ್ಯಸಭೆಗೆ ನೀಡಿದ ಉತ್ತರ ತೀವ್ರ ಟೀಕೆಗೆ ಗುರಿಯಾಗಿದ್ದು, ಶನಿವಾರ ಸಹೋದ್ಯೋಗಿ ಸಚಿವರೇ ಅವರ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಇಂದು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಸಂಸದೀಯ ವ್ಯವಹಾರಗಳ ಸಚಿವ ವೆಂಕಯ್ಯ ನಾಯ್ಡು ಅವರು, ಕೃಷಿ ಸಚಿವರ ಹೇಳಿಕೆ ಆಕ್ಷೇಪಾರ್ಹ ಎಂದು ಹೇಳಿದ್ದಾರೆ.
ಎಲ್ಲಾ ಆತ್ಮಹತ್ಯೆಯನ್ನೂ ಒಂದೇ ರೀತಿಯಲ್ಲಿ ವಿಶ್ಲೇಷಿಸಲಾಗಿದೆ. ಕ್ರೈಂ ರೆಕಾರ್ಡ್ ಬ್ಯೂರೊ ನೀಡಿದ ವರದಿಯಲ್ಲಿ ತಪ್ಪಾಗಿದೆ. ಗ್ರಾಮೀಣ ಭಾಗದಲ್ಲಿ ಕಷ್ಟದಿಂದಾಗಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ನಾಯ್ಡು ಹೇಳಿದ್ದಾರೆ.
ಇದೇ ವೇಳೆ ಪ್ರತಿಪಕ್ಷ ಕಾಂಗ್ರೆಸ್ ವಿರುದ್ಧವೂ ವಾಗ್ದಾಳಿ ನಡೆಸಿದ ನಾಯ್ಡು, ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಹಾಗೂ ರಾಜಸ್ಥಾನ ಮುಖ್ಯಮಂತ್ರಿ ವಸುಂಧರಾ ರಾಜೇ ಅವರ ರಾಜಿನಾಮೆ ಕೇಳುವುದು ಸರಿಯಲ್ಲ ಎಂದರು.
ರಾಷ್ಟ್ರೀಯ ಅಪರಾಧಗಳ ದಾಖಲೆ ಬ್ಯುರೋ ವರದಿಯನ್ನಾಧರಿಸಿ ನಿನ್ನೆ ರಾಜ್ಯಸಭೆಯಲ್ಲಿ ಲಿಖಿತ ಉತ್ತರ ನೀಡಿದ್ದ ಕೃಷಿ ಸಚಿವ, ಪ್ರೇಮ ಪ್ರಕರಣ, ಕೌಟುಂಬಿಕ ಸಮಸ್ಯೆ, ನಪುಂಸಕತ್ವದಂಥ ಕಾರಣಗಳಿಂದಾಗಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಿದ್ದರು.

